ತುನಿಶಾ ಶರ್ಮ. ಹಿಂದಿ ಧಾರಾವಾಹಿ ಹಾಗೂ ಟಿವಿ ಶೋಗಳ ಮೂಲಕ ಖ್ಯಾತರಾಗಿದ್ದ ನಟಿ. ಸೀರಿಯಲ್ ಶೂಟಿಂಗ್ ವೇಳೆ ಟಾಯ್ಲೆಟ್ಟಿನಲ್ಲಿಯೇ ನೇಣು ಹಾಕಿಕೊಂಡು ಮೃತಪಟ್ಟ ಈ ನಟಿಗೆ ವಯಸ್ಸಿನ್ನೂ 20 ವರ್ಷ. ಅಷ್ಟೆ. ಸೀರಿಯಲ್ ಹಾಗೂ ಶೋಗಳಲ್ಲಿ ಖ್ಯಾತರಾಗಿದ್ದ ತುನಿಶಾ ಶರ್ಮ, ಈಗಿನ್ನೂ ಬೆಳೆಯುತ್ತಿದ್ದ ಹುಡುಗಿ. ಕತ್ರಿನಾ ಕೈಫ್ ಚಿತ್ರಗಳಲ್ಲಿ ಅವರ ಬಾಲನಟಿಯಾಗಿ ಖ್ಯಾತರಾಗಿದ್ದ ತುನಿಶಾ ಶರ್ಮ, ಕೇವಲ 20ನೇ ವಯಸ್ಸಿಗೆ ಲವ್ & ಬ್ರೇಕಪ್ ಎರಡೂ ಆಗಿ ನೇಣಿಗೆ ಶರಣಾಗಿದ್ದಾರೆ. ಆಕೆ ಪ್ರೀತಿಸುತ್ತಿದ್ದ ಹುಡುಗನ ಹೆಸರು ಶೀಜಾನ್ ಮೊಹಮ್ಮದ್ ಖಾನ್. ಲವ್ ಜಿಹಾದ್ ಆರೋಪ ಕೇಳಿ ಬಂದಿರೋದೇ ಈ ಕಾರಣಕ್ಕೆ.

ಶೀಜಾನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಶೀಜಾನ್ ಮೊಹಮ್ಮದ್ ಖಾನ್ ಅರೆಸ್ಟ್ ಆಗಿದ್ದಾನೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಅಲ್ಲಿ ಶೂಟಿಂಗ್ ವೇಳೆಯೇ ಶೌಚಾಲಯಕ್ಕೆ ತೆರಳಿದ ನಟಿ ತುನಿಷಾ ಶರ್ಮಾ ಶರ್ಮಾ ಅಲ್ಲೇ ಸಾವಿಗೆ ಶರಣಾಗಿದ್ದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಟ ಶೀಜಾನ್ ಮೊಹಮ್ಮದ್ ಖಾನ್ನನ್ನು ಬಂಧಿಸಿ 4 ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಇನ್ನೊಬ್ಬ ಸಹನಟ ಪಾರ್ಥ ಝುಟ್ಕಿ ಸೇರಿದಂತೆ ಒಟ್ಟಾರೆ 14 ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ತುನಿಶಾ ತಾಯಿಯೂ ಕೂಡಾ ಶೀಜಾನ್ ವಿರುದ್ಧವೇ ದೂರು ಕೊಟ್ಟಿರುವ ಕಾರಣ ಅರೆಸ್ಟ್ ಮಾಡಲಾಗಿದೆ. ತುನಿಶಾ ಹಾಗೂ ಶೀಜಾನ್ ಮಧ್ಯೆ ರಿಲೇಷನ್ ಶಿಪ್ ಇತ್ತು. 15 ದಿನಗಳ ಹಿಂದೆ ಬ್ರೇಕಪ್ ಆಗಿತ್ತು. ಆದರೆ ತುನಿಶಾಗೆ ಬ್ರೇಕಪ್ ಇಷ್ಟವಿರಲಿಲ್ಲ. ಹೀಗಾಗಿಯೇ ಮಾನಸಿಕ ಒತ್ತಡಕ್ಕೊಳಗಾಗಿ ತುನಿಶಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಆರೋಪ. ಮತ್ತೊಬ್ಬ ನಟ ಪಾರ್ಥ, ಈ ಘಟನೆ ನಡೆದಾಗ ಸೆಟ್ಟಿನಲ್ಲಿ ಇರಲಿಲ್ಲವಂತೆ. ಆದರೆ ತುನಿಶಾ ಮತ್ತು ಶೀಜಾನ್ ನಡುವಿನ ರಿಲೇಷನ್ಶಿಪ್ ಈತನಿಗೂ ಗೊತ್ತಿತ್ತು ಎನ್ನಲಾಗಿದೆ. ಆದರೆ ಅದು ಆಕೆಯ ಪರ್ಸನಲ್ ಎಂದು ಸುಮ್ಮನಿದ್ದೆ ಎಂದು ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆಂಬ ಮಾಹಿತಿಯೂ ಇದೆ.

ಇಬ್ಬರ ಮಧ್ಯೆ ಲವ್ ಮತ್ತು ರಿಲೇಷನ್ ಶಿಪ್ ಇತ್ತು. ಈ ಮಧ್ಯೆ ತುನಿಶಾ ಪ್ರೆಗ್ನೆಂಟ್ ಆಗಿದ್ದಳೆಂಬ ವರದಿಯೂ ಗುಲ್ಲಾಗಿತ್ತು. ಈಗ ಪೊಸ್ಟ್ ಮಾರ್ಟಂ ರಿಪೋರ್ಟ್ ಬಂದಿದ್ದು, ಆಕೆ ಸಾಯುವಾಗ ಗರ್ಭಿಣಿ ಆಗಿರಲಿಲ್ಲ ಎನ್ನುವುದು ಖಚಿತವಾಗಿದೆ. ನೇಣು ಹಗ್ಗದಿಂದಲೇ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ. ದೇಹದ ಮೇಲೆ ಬೇರಾವ ಗಾಯದ ಗುರುತುಗಳೂ ಪತ್ತೆಯಾಗಿಲ್ಲ.
ಆದರೆ ಟಾಯ್ಲೆಟ್ ರೂಮಿನಲ್ಲಿ ಉತ್ತಮ ಹೈಟ್ ಕೂಡಾ ಇದ್ದ ನಟಿ ತುನಿಶಾ ಶರ್ಮ ನೇಣು ಹಾಕಿಕೊಳ್ಳೋದು ಹೇಗೆ ಸಾಧ್ಯ? ಟಾಯ್ಲೆಟ್ಟಿಗೆ ಬೇರೆ ಏನನ್ನೂ ತೆಗೆದುಕೊಂಡು ಹೋಗದೆ ಕೇವಲ ಹಗ್ಗ ತೆಗೆದುಕೊಂಡು ನೇಣು ಹಾಕಿಕೊಳ್ಳೋದು ಯಾರ ಕಣ್ಣಿಗೂ ಬೀಳಲಿಲ್ಲವಾ? 15 ದಿನದ ಹಿಂದೆ ನಡೆದಿದ್ದ ಗಲಾಟೆ ಏನು? ಆ ಗಲಾಟೆಗೂ ಈ ಸಾವಿಗೂ ಏನು ಸಂಬಂಧ? ಹೀಗೆ ಪೊಲೀಸರು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಕೆ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಬಗ್ಗೆ ರಾಜಕೀಯ ಹೇಳಿಕೆಗಳೂ ಹೊರಬಿದ್ದಿವೆ. ಈ ಘಟನೆ ಬಗ್ಗೆ ಲವ್ ಜಿಹಾದ್ ಆಂಗಲ್ನಲ್ಲೂ ತನಿಖೆಯಾಗಬೇಕು ಎಂದು ಮಹಾರಾಷ್ಟ್ರ ಬಿಜೆಪಿಯ ಕೆಲ ನಾಯಕರು ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕ ರಾಮ್ ಕದಮ್ ಪ್ರಕರಣದ ಹಿಂದೆ ಲವ್ ಜಿಹಾದ್ ಇದೆಯೇ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದಿದ್ದಾರೆ. ಸದ್ಯದ ಮಟ್ಟಿಗೆ ಈ ಪ್ರಕರಣದಲ್ಲಿ ಲವ್ ಜಿಹಾದ್ ಇಲ್ಲ ಎಂದಿದ್ದಾರೆ ಪೊಲೀಸರು. ಆದರೆ ತನಿಖೆ ಎಲ್ಲೆಲ್ಲಿಗೆ ಹೋಗುತ್ತೋ.. ಟೈಂ & ಇನ್ವೆಸ್ಟಿಗೇಷನ್ ಉತ್ತರ ನೀಡಲಿದೆ.



