ಹೇಗಿದೆ ಬಘೀರನ ಕಥೆ..? ಪ್ರೇಕ್ಷಕರಿಗೆ ಶ್ರೀಮುರಳಿ-ಪ್ರಶಾಂತ್ ನೀಲ್-ಡಾ.ಸೂರಿ ಮ್ಯಾಜಿಕ್ ಇಷ್ಟವಾಯ್ತಾ .. ಬಘೀರ ಗೆಲ್ಲುತ್ತಾ.. ಇಂತಹ ಹಲವು ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಬಘೀರ ಚಿತ್ರದ ಬಗ್ಗೆ ನಿರ್ದೇಶಕರು ಮೊದಲೇ ಇದು ಸೂಪರ್ ಹೀರೋ ಕಲ್ಪನೆಯ ಚಿತ್ರ ಎಂದು ಹೇಳ್ಕೊಂಡಿದ್ರು. ಸೂಪರ್ ಮ್ಯಾನ್ ಅಂದ ತಕ್ಷಣ, ಹೀರೋಗೆ ಮಿಂಚು, ಗುಡುಗು, ಸಿಡಿಲು, ಇನ್ಯಾವುದೋ ವಿಚಿತ್ರ ಬೆಳಕು, ಯಾವುದೋ ಹುಳ ಕೊಡುವ ವಿಚಿತ್ರ ಶಕ್ತಿ.. ಇಂಥ ಕಥೆಗಳೇ ಇರ್ತವೆ. ಆದರೆ ಬಘೀರನ ಸೂಪರ್ ಪವರ್ ರಹಸ್ಯ ಇದ್ಯಾವುದೂ ಅಲ್ಲ. ಬಘೀರನ ಶಕ್ತಿಯೇ ಆತನ ಬುದ್ದಿವಂತಿಕೆ ಮತ್ತು ಭೀಮಬಲ.
ಪ್ರಶಾಂತ್ ನೀಲ್ ಚಿತ್ರದಲ್ಲಿ ಈ ಹಿಂದಿನ ಉಗ್ರಂ, ಕೆಜಿಎಫ್, ಸಲಾರ್ ಚಿತ್ರಗಳಲ್ಲಿ ಒಂದು ಕಾಲ್ಪನಿಕ ಊರಿನ ಕಥೆ ಹೇಳಿದ್ರಲ್ಲ. ಅಂತಹ ಕಥೆ ಹೇಳಿಲ್ಲ. ಪ್ರಶಾಂತ್ ನೀಲ್ ಕಥೆಗೆ ಒಂದು ಅಚ್ಚುಕಟ್ಟಾದ ಚಿತ್ರಕಥೆ, ಸಂಭಾಷಣೆ ಕೊಟ್ಟು, ಚೆಂದದ ಕಮರ್ಷಿಯಲ್ ಸಿನಿಮಾ ಮಾಡಿದ್ದಾರೆ ಡಾ. ಸೂರಿ.
ಚಿತ್ರದಲ್ಲಿ ಶ್ರೀಮುರಳಿಗೆ ಎರಡು ಶೇಡ್‌ಗಳಿವೆ. ಒಂದು ಐಪಿಎಸ್ ಅಧಿಕಾರಿ ವೇದಾಂತ್ ಆಗಿ. ಇನ್ನೊಂದು ಬಘೀರನಾಗಿ. ಅವನು ಬಘೀರನಾಗಿ ಕಾಣಿಸೋದು ಕತ್ತಲಲ್ಲಿ ಮಾತ್ರ. ಹಾಗಂತ ಪೂರ್ತಿ ಸಿನಿಮಾ ಕತ್ಲೆ ಕತ್ಲೆ ಇಲ್ಲ. ವೇದಾಂತ್ ಅನ್ನೋ ಹುಡುಗ ಬಘೀರ ನಾಗೋದಕ್ಕೆ ಕಾರಣವಾಗೋದು ಸುಧಾರಾಣಿ. ಹೇಗೆ ಅಂತಾ ಕೇಳ್ಬೇಡಿ, ಸಿನಿಮಾ ನೋಡಿ.. ಗೊತ್ತಾಗುತ್ತೆ.
ಹೀರೋಯಿನ್ ರುಕ್ಮಿಣಿ ವಸಂತ್. ಸ್ಕ್ರೀನ್‌ನಲ್ಲಿ ಬರೋದು ನಿಮಿಷಗಳ ಲೆಕ್ಕದಲ್ಲಿ. ಆದರೆ, ಜಸ್ಟ್ ಫಾರ್ ಗ್ಲಾಮರ್ ಅನ್ನೋ ಕ್ಯಾರೆಕ್ಟರ್ ಇಲ್ಲ. ಅವರದ್ದು ಚಿತ್ರದ ಕಥೆ, ಚಿತ್ರಕಥೆಗೆ ಎಷ್ಟು ಬೇಕೋ ಅಷ್ಟು ಇದೆ. ಒಂದೊಳ್ಳೆ ರೊಮ್ಯಾಂಟಿಕ್ ಲವ್ ಸ್ಟೋರಿನೂ ಇದೆ.
ಸಿಬಿಐ ಅಧಿಕಾರಿಯಾಗಿ ಬರೋ ಪ್ರಕಾಶ್ ರಾಜ್, ಇಡೀ ಚಿತ್ರಕ್ಕೆ ಟ್ವಿಸ್ಟ್ ಕೊಡ್ತಾರೆ. ರಂಗಾಯಣ ರಘು, ಅವಿನಾಶ್, ಅಚ್ಯುತ್ ಕುಮಾರ್, ಬಘೀರನಿಗೆ ಚಾಲೆಂಜ್ ಹಾಕೋ ಪಾತ್ರದಲ್ಲಿ ಗರುಡಾ ರಾಮ್.. ಎಲ್ಲರ ಕ್ಯಾರೆಕ್ಟರೂ ಸಿನಿಮಾದಲ್ಲಿ ರಿಜಿಸ್ಟರ್ ಆಗುತ್ತಾ ಹೋಗುತ್ತದೆ. ಮಂಗಳೂರಿನಲ್ಲಿ ನಡೆಯುವ ಕಥೆಯಲ್ಲಿ ಅಂಗಾಂಗ ಕಳ್ಳಸಾಗಣೆಯ ಕಥೆ ಇದೆ. ಕಥೆಯನ್ನು ಸಿನಿಮಾ ನೋಡುವ ಪ್ರೇಕ್ಷಕರಿಗೆ ಚೆಂದವಾಗಿ ಕನೆಕ್ಟ್ ಮಾಡೋದ್ರಲ್ಲಿ ಸೂರಿ ಗೆದ್ದಿದ್ದಾರೆ.
ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಲವ್ ಸ್ಟೋರಿಗೆ ಹೆಚ್ಚಿನ ಜಾಗ ಇಲ್ಲ. ಒಂದು ಹಾಡಿನಲ್ಲಿ ಮಾತ್ರ ಶ್ರೀಮುರಳಿ ರೊಮ್ಯಾಂಟಿಕ್ ಆಗಿದ್ದಾರೆ. ಉಳಿದಂತೆ ರಫ್ ಆ್ಯಂಡ್ ಟಫ್. ಹಾಗಂತ ಉಗ್ರಂನಲ್ಲಿದ್ದಂತ ಬೆಂಕಿ ಡೈಲಾಗುಗಳಿಲ್ಲ. ಕಥೆಗೆ ತಕ್ಕಂತೆ ಊಟಕ್ಕೆ ತಕ್ಕಂತೆ ಉಪ್ಪು-ಹುಳಿ-ಖಾರ ಇರುವಂತೆ ಇದೆ.
ಶ್ರೀಮುರಳಿ ಪಾತ್ರಕ್ಕೆ ಮಾತು ಕಮ್ಮಿ, ಕೆಲಸ ಜಾಸ್ತಿ. ಮೊದಲ ಒಂದು ಗಂಟೆಯ ಶ್ರೀಮುರಳಿಯೇ ಬೇರೆ.. ನಂತರದ ಮತ್ತೊಂದು ಅವತಾರ ಕೊಡುವ ಥ್ರಿಲ್ಲೇ ಬೇರೆ. ಫೈಟ್ ಇಷ್ಟಪಡೋವ್ರಿಗಂತು ಸಿನಿಮಾ ಸಖತ್ ಖುಷಿ ಕೊಡುತ್ತೆ. ಶ್ರೀಮುರಳಿ ಮ್ಯಾನರಿಸಂ ಕೂಡಾ ಅತಿರೇಕ ಇಲ್ಲ. ಕಥೆ ಸಿಂಪಲ್ಲು. ಆದರೆ ಪ್ರೆಸೆಂಟೇಷನ್ ಬೊಂಬಾಟ್ ಆಗಿದೆ.
ಚಿತ್ರದಲ್ಲಿ ಪ್ರಶಾಂತ್ ನೀಲ್ ಕಥೆ, ಡಾ.ಸೂರಿ ನಿರೂಪಣೆಯ ಜೊತೆಯಲ್ಲೇ ಚಿತ್ರದಲ್ಲಿ ಇನ್ನೂ ಕೆಲವು ಹೀರೋಗಳಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ಕು, ಬಿಜಿಎಂ ಕಥೆಗೆ ಸೂಕ್ತವಾಗಿ ಟ್ಯೂನ್ ಆಗುತ್ತದೆ. ಚೇತನ್ ಡಿಸೋಜಾ ಪರಿಕಲ್ಪನೆಯ ಆಕ್ಷನ್ ಸೀಕ್ವೆನ್ಸ್ ಕಿಕ್ ಕೊಡುತ್ತವೆ. ಎಜೆ ಶೆಟ್ಟಿ ಕ್ಯಾಮೆರಾ ಕೆಲಸ ಕಣ್ಣಿಗೆ ಹಬ್ಬ ಮಾಡುತ್ತದೆ. ಹೊಂಬಾಳೆಯವರು ಇಲ್ಲಿಯೂ ಮತ್ತೊಮ್ಮೆ ಟೀಂ ವರ್ಕ್ ಮಾಡಿಸಿ ಗೆದ್ದಿದ್ದಾರೆ. ಇದು ಪಕ್ಕಾ ಆಕ್ಷನ್ ಸಿನಿಮಾ. ಲಾಜಿಕ್ಕು ಹುಡುಕಿದರೆ ಮ್ಯಾಜಿಕ್ ಮಿಸ್ಸಾಗುತ್ತೆ.
ಅಂದಹಾಗೆ ಬಘೀರ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಸುಮಾರು ೩ ಕೋಟಿ ದಾಟಿದೆ. ಹತ್ತಿರತ್ರ ೬೦ ಸಾವ್ರ ಟಿಕೆಟ್ಸ್ ಸೇಲ್ ಆಗಿದೆ. ವಿಶೇಷ ಏನ್ ಗೊತ್ತಾ.. ಅದ್ಧೂರಿ, ಆರ್ಭಟದ ಪ್ರಚಾರ ಮಾಡ್ಕೊಂಡ್ ಬಂದ ಮಾರ್ಟಿನ್ ಚಿತ್ರಕ್ಕಿಂತ ಕಲೆಕ್ಷನ್ ಜಾಸ್ತಿ ಆಗಿದೆ. ಸಿನಿಮಾ ಥಿಯೇಟರಿಗೆ ಬರೋ ಜನರ ಕ್ರೌಡು ಜಾಸ್ತಿ ಆಗ್ತಾ ಇರೋದು ಚಿತ್ರಕ್ಕೆ ಸಿಕ್ಕಿರೋ ಪಾಸಿಟಿವ್ ರೆಸ್ಪಾನ್ಸ್. ಬಘೀರ ಸೂಪರ್ ಡ್ಯೂಪರ್ ಹಿಟ್ ಆಗುತ್ತೋ ಇಲ್ವೋ ಗೊತ್ತಿಲ್ಲ, ಸಿನಿಮಾ ಗೆಲ್ಲೋ ಸಿಗ್ನಲ್ಲನ್ನಂತೂ ಕೊಡ್ತಾ ಇದೆ.



