ಟಗರು ಸೂಪರ್ ಡ್ಯೂಪರ್ ಹಿಟ್ ನಂತರ ಅಂತಹುದೇ ಒಂದು ಹಿಟ್ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ದುನಿಯಾ ಸೂರಿ. ಅಮರ್ ಚಿತ್ರದ ಮೇಲೆ ಇಡೀ ಚಿತ್ರರಂಗವೇ ದೊಡ್ಡ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಆವರೇಜ್ ಲೆವೆಲ್ಲಿಗೂ ಹೋಗಲಾಗದೆ ಸುಸ್ತು ಹೊಡೆದಿತ್ತು. ಇತ್ತ ಸೂರಿಗೂ ಟಗರು ನಂತರ ಮಾಡಿದ ಪಾಪ್ ಕಾರ್ನ್ ಮಂಕಿ ಟೈಗರ್ ಅನ್ನೋ ಅಟ್ಟರ್ ಫ್ಲಾಪ್ ಸಿನಿಮಾ ಕಾಡುತ್ತಲೇ ಇದೆ.

ಒಬ್ಬ ನಿರ್ದೇಶಕರಾಗಿ ದುನಿಯಾ ಸೂರಿಗೆ, ನಾಯಕನಾಗಿ ಹಿಟ್ ಎದುರು ನೋಡುತ್ತಿರುವ ಅಭಿಷೇಕ್ ಅಂಬರೀಷ್ ಹಾಗೂ ನಾಯಕಿಯಾಗಿ ಹಿಟ್ ಚಿತ್ರಕ್ಕೆ ಕಾಯುತ್ತಿರೋ ರಚಿತಾ ರಾಮ್ ಮೂವರಿಗೂ ಈಗ ಒಂದು ಗೆಲುವು ಬೇಕು. ಇದೇ ಮೊದಲ ಬಾರಿಗೆ ಸೂರಿ ಚಿತ್ರದಲ್ಲಿ ನಟಿಸಿರೋ ರಚಿತಾ ರಾಮ್ ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರು. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದ ಅಭಿಷೇಕ್, ಸೂರಿ ಚಿತ್ರದಲ್ಲಿ ರಫ್ & ಟಫ್ ಕಾಪ್ ರುದ್ರ. ಪ್ರಿಯಾಂಕಾ ಕುಮಾರ್ ಚಿತ್ರದ ಇನ್ನೊಬ್ಬ ನಾಯಕಿ. ಅಭಿಷೇಕ್ ಈ ಚಿತ್ರದೊಂದಿಗೆ ಭರ್ಜರಿ ಗೆಲುವಿನ ಕನಸು ಕಾಣುತ್ತಿದ್ದು, ಚಿತ್ರದ ಚಿತ್ರೀಕರಣ ಈಗ ಮುಕ್ತಾಯವಾಗಿದೆ.

ಸುಧೀರ್ ಕೆ.ಎಂ. ನಿರ್ಮಾಣದ ಚಿತ್ರ ಫೆಬ್ರವರಿ 16ಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ. ಸೂರಿ ಚಿತ್ರಕ್ಕೆ ಮಾಸ್ತಿ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು ಟಗರು ಮ್ಯಾಜಿಕ್ ರಿಪೀಟ್ ಆಗುವ ನಿರೀಕ್ಷೆ ಚಿತ್ರತಂಡದಲ್ಲಿದೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಮೊದಲಾದ ಅನುಭವಿ ಕಲಾವಿದರೂ ಚಿತ್ರದಲ್ಲಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಜೊತೆಗೆ ಸೂರಿಯ ರಾ ಸ್ಟೈಲ್ ಮೇಕಿಂಗ್, ಕತ್ತಲು ಬೆಳಕಿನ ಆಟ, ಚಿತ್ರ ವಿಚಿತ್ರ ಪಾತ್ರಗಳು, ಕ್ರೌರ್ಯದ ಜೊತೆ ಜೊತೆಯಲ್ಲೇ ಪ್ರೀತಿಯ ಸೆಳಕು ನೀಡುವ ಸೂರಿ ಸ್ಟೈಲ್ ವಿಜೃಂಭಿಸಲಿದೆ.



