ಹಸುರಿನ ಬನಸಿರಿಗೇ ಒಲಿದು.. ಸೌಂದರ್ಯ ಸರಸ್ವತಿ ಧರೆಗಿಳಿದು..
ಚೆಲುವಿನ ಬಲೆಯ ಬೀಸಿದಳೋ.. ಈ ಗಂಧದ ಗುಡಿಯಲಿ ನೆಲೆಸಿದಳೋ..
ಅಲ್ಲಿ ಹಾಡು ಬರದಿದ್ದರೂ ಕಿವಿಯಲ್ಲಿ ಈ ಸಾಹಿತ್ಯ ಮೊಳಗುತ್ತಲೇ ಇರುತ್ತದೆ. ಕಿವಿಯಲ್ಲಿ ಪುನೀತ್ ಅವರೇ ಇದನ್ನು ಹೇಳುತ್ತಿದ್ದಾರೇನೋ ಎನಿಸುತ್ತದೆ. ಕಣ್ಣ ಮುಂದೆ ದೃಶ್ಯಲೋಕ ಅನಾವರಣಗೊಳುತ್ತದೆ. ಕಾಡಿನಲ್ಲಿ ಪರದಾಡುತ್ತ.. ನೀರಿನಲ್ಲಿ ಈಜಾಡುತ್ತ.. ಹಾವುಗಳಿಗೆ ಹೆದರುತ್ತಾ.. ಸಾಗುವ ಅಪ್ಪು ಜೊತೆ ಕರುನಾಡಿನ ವನ್ಯಲೋಕದಲಿ ನೋಡುವ ಪ್ರತಿಯೊಬ್ಬ ಪ್ರೇಕ್ಷಕನೂ ಪ್ರಯಾಣ ಮಾಡುತ್ತಾನೆ. ಹಾವಿಗೆ ಹೆದರುವ ಅಪ್ಪು ನಂಗೆ ಹೆಂಡ್ತಿ ಮಕ್ಕಳಿದ್ದಾರೆ. ಸೇಫಾಗಿ ಮನೆಗೆ ಹೋಗ್ತೀವಿ ತಾನೇ.. ಎನ್ನುವಾಗ ನೋಡುತ್ತಿರುವ ಪ್ರೇಕ್ಷಕ ಒಳಗೊಳಗೇ ಬಿಕ್ಕುತ್ತಾನೆ. ಅಶ್ವಿನಿ ಜೊತೆ ಹೆಜ್ಜೆ ಹಾಕುವ ದೃಶ್ಯ ನೋಡುವಾಗ ಭಾವುಕನಾಗುತ್ತಾನೆ. ಆದರೆ ಅದೆಲ್ಲವನ್ನೂ ಮೀರಿ ಈ ಸಿನಿಮಾ ನಮ್ಮ ಕರ್ನಾಟಕವನ್ನು ನಮಗೇ ವಿಶೇಷವಾಗಿ ಪರಿಚಯ ಮಾಡಿಸುತ್ತಾ ಹೋಗುತ್ತದೆ.
ಇದು ಯಾರ ತಪಸಿನ ಫಲವೋ.. ಈ ಕಂಗಳು ಮಾಡಿದ ಪುಣ್ಯವೋ..
ಪ್ಲಾಸ್ಟಿಕ್ ಬಳಸಬಾರದು ಎಂಬ ಸಂದೇಶವನ್ನು ಎಲ್ಲರೂ ಪಾಲಿಸಬೇಕು. ಮಾನವೀಯತೆ, ಸರಳತೆಯ ಪರಾಕಾಷ್ಠೆಯ ದರ್ಶನವಾಗುತ್ತದೆ. ಸುಮ್ಮನೆ ನೋಡಿ ಸುಮ್ಮಾನ ನಿಮ್ಮದಾಗುತ್ತದೆ ಎನ್ನುವುದು ಹಿರಿಯ ಪತ್ರಕರ್ತ ಜೋಗಿ ಬರೆದುಕೊಂಡಿರುವ ಸಾಲು. ಹಾಗೆಯೇ ನೋಡುತ್ತ ನೋಡುತ್ತ ಇದು ಅಪ್ಪು ಸಿನಿಮಾ ಆಗದೆ ನಮ್ಮ ಸಿನಿಮಾ ಆಗುತ್ತದೆ. ಕರ್ನಾಟಕವನ್ನು ಸುತ್ತಾಡುತ್ತ, ನಾನಾ ವಿಚಾರಗಳನ್ನು ತಿಳಿಸುತ್ತಾ ಹೋಗುವ ಅಪ್ಪು ಹೀರೋಯಿಸಂ ಇಲ್ಲದೆ “ವಿಶ್ವ ಮಾನವ” ಸಂದೇಶ ಸಾರುತ್ತಾರೆ. ಕಡೆಯ ದೃಶ್ಯದಲ್ಲಿ ಬೆಟ್ಟದ ಹೂವು ನೀರಿನೊಂದಿಗೆ ತೇಲಿಹೋಗುವಾಗ ಅಪ್ಪುವಿನ ಬಿಂಬ ಮನಸ್ಸಿನೊಳಗೆ ಇಳಿಯುತ್ತದೆ. ಶುರುವಾಗುವುದೂ ಬೆಟ್ದದ ಹೂವಿನಿಂದ. ಕೊನೆಯಾಗುವುದು ಬೆಟ್ಟದ ಹೂವಿನಿಂದ. ಈ ಡಾಕ್ಯು ಸಿನಿಮಾದಲ್ಲಿ ಅಪ್ಪು ನಗುತ್ತಲೇ ನಗಿಸುತ್ತಲೆ ಇರುತ್ತಾರೆ. ನೋಡುವವನದ್ದು ಮಾತ್ರ ಕಣ್ಣೀರು. ಕಡೆಯ 5 ನಿಮಿಷ.. ಕಣ್ಣೀರು ಹಾಕಲೇಬೇಕು.. ಅಮೋಘ ವರ್ಷ, ಪ್ರತೀಕ್ ಶೆಟ್ಟಿ ಹಾಗೂ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅಭಿನಂದನಾರ್ಹರು.



