ಆಪರೇಷನ್ ಲೇಟ್ ಆದರೆ ಸ್ಟ್ರೋಕ್ ಹೊಡೆಯಬಹುದು. ಪಾರ್ಶ್ವವಾಯು ಆಗುವ ಅಪಾಯ ಇದೆ. ಜಾಮೀನು ಕೊಡಿ. ಚಾರ್ಜ್ ಶೀಟ್ ಲೂಪ್ ಹೋಲ್ʻಗಳನ್ನು ಹುಡುಕಿ ಜಾಮೀನು ಪಡೆಯುವ ಹಾದಿಯಲ್ಲಿ ವಿಫಲರಾದ ದರ್ಶನ್ ಪರ ವಕೀಲರು, ಈಗ ದರ್ಶನ್ ಅವರ ಅನಾರೋಗ್ಯದ ಕಾರಣ ಮುಂದಿಟ್ಟು ಜಾಮೀನು ಪಡೆಯಲು ಹೋರಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಎ2 ಆಗಿದ್ದಾರೆ. ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ವೈಭವೋಪೇತ ಜೀವನ ನಡೆಸಿ, ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಜಾಮೀನು ಪಡೆಯಲು ಇನ್ನಿಲ್ಲದ ಹೋರಾಟ ನಡೆಸುತ್ತಿರುವ ದರ್ಶನ್ ಅವರಿಗೆ ಜಾಮೀನು ಸಿಗೋದು ಇನ್ನೂ ಖಚಿತವಾಗಿಲ್ಲ. ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ಮಾಡಲಾಗಿದ್ದು, ಮಂಗಳವಾರ (ಅ.29) ಮಧ್ಯಾಹ್ನ 2.30ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ದರ್ಶನ್ ಪರ ವಕೀಲರು ದರ್ಶನ್ ಅವರ ಆರೋಗ್ಯದ ಸಮಸ್ಯೆಯನ್ನೇ ಪ್ರಮುಖವಾಗಿ ವಾದಿಸಿದ್ದಾರೆ. ಎಂಆರ್ಐ, ಸಿಟಿ ಸ್ಕ್ಯಾನ್ ಮಾಡಿಸಲಾಗಿದೆ. ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ನ್ಯೂರೋ ಸರ್ಜನ್ ಮೂರು ಅಂಶ ಹೇಳಿದ್ದಾರೆ. ನಂಬ್ನೆಸ್ ಇದೆ. ರಕ್ತಪರಿಚಲನೆ ಆಗುತ್ತಿಲ್ಲ. ಇದರಿಂದ ಕಿಡ್ನಿಗೆ ಸಮಸ್ಯೆ ಆಗಬಹುದು. ಡಿಸ್ಕ್ ಸಮಸ್ಯೆ ಇದೆ. ತಕ್ಷಣ ಸರ್ಜರಿಗೆ ಸೂಚಿಸಿದ್ದಾರೆ. ಇಲ್ಲವಾದರೆ ಪ್ಯಾರಾಲಿಸಿಸ್ ಆಗಬಹುದು. ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ. ಬೆಂಗಳೂರಿನ ಆಸ್ಪತ್ರೆ ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮತ್ತು ಆಪರೇಷನ್ಗೆ ಸೂಚಿಸಲಾಗಿದೆ. ಹೀಗಾಗಿ ಆದಷ್ಟು ಬೇಗ ಜಾಮೀನು ನೀಡಿ ಎಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ.
ನಟ ದರ್ಶನ್‌ಗೆ ಫಿಸಿಯೋಥೆರಪಿ ಮತ್ತು ಬೆನ್ನುಹುರಿ ನೋವಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಬಳ್ಳಾರಿ ಅಥವಾ ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಎಸ್ಪಿಪಿ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಲ್ಪಟ್ಟಿದೆ.
ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ದರ್ಶನ್ ಅವರ ವೈದ್ಯಕೀಯ ವರದಿಯ ಪ್ರತಿಯನ್ನು ನಮಗೆ ನೀಡಬೇಕು. ಅದನ್ನು ಪರಿಶೀಲಿಸಿ, ಅಗತ್ಯಬಿದ್ದರೆ ಆಕ್ಷೇಪಣೆ ಸಲ್ಲಿಸಲಾಗುವುದು. ಆನಂತರ ವಾದ ಮಂಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.



