ವೇದ ಚಿತ್ರ 3ನೇ ವಾರಕ್ಕೆ ಕಾಲಿಟ್ಟಿದ್ದರೆ, ವೇದ ಯಾತ್ರೆ ಅಂತಿಮ ಹಂತದಲ್ಲಿದೆ. ಶಿವಣ್ಣ ಅಭಿನಯದ 125ನೇ ಸಿನಿಮಾ ವರ್ಷಾರಂಭದಲ್ಲೇ ಚಿತ್ರರಂಗಕ್ಕೆ ಬೇಕಿದ್ದ ಬೂಸ್ಟ್ ಕೊಟ್ಟಿದೆ.



ನಿರ್ಮಾಪಕಿ ಗೀತಾ ಅವರಷ್ಟೇ ಅಲ್ಲ, ಗಾನವಿ ಲಕ್ಷ್ಮಣ್, ಆದಿತಿ ಸಾಗರ್ ಹಾಗೂ ನಿರ್ದೇಶಕ ಹರ್ಷ ಕೂಡಾ ಜೊತೆಯಲ್ಲಿದ್ದದ್ದು ವಿಶೇಷ. ಇದೀಗ ವೇದ ತಂಡ ಬೆಳಗಾವಿ, ಹುಬ್ಬಳ್ಳಿ, ಧಾರವಾಡದಲ್ಲಿ ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿ, ಹಾಡಿ ಸಂಭ್ರಮಿಸಿ, ಮೆರವಣಿಗೆ ಮೂಲಕ ಧನ್ಯವಾದ ಅರ್ಪಿಸಿ ಇಂದು ಶಿವಮೊಗ್ಗ ಹಾಗೂ ತುಮಕೂರಿಗೆ ಭೇಟಿ ಕೊಡುತ್ತಿದೆ.

ಶಿವಮೊಗ್ಗ, ಶಿವಣ್ಣಗೆ ಹೆಣ್ಣು ಮತ್ತು ಕಣ್ಣು ಕೊಟ್ಟ ಊರು. ಮಾವ ಬಂಗಾರಪ್ಪನವರ ಕರ್ಮಭೂಮಿ. ಇತ್ತೀಚೆಗೆ ಗೀತಾ ಮತ್ತು ಶಿವಣ್ಣ ಶಿವಮೊಗ್ಗಕ್ಕೆ ಹೋಗಿದ್ದರ ಬಗ್ಗೆ ಕುಮಾರ್ ಬಂಗಾರಪ್ಪ ಟೀಕೆ ಮಾಡಿದ್ದರು. ಏಕೆಂದು ಯಾರಿಗೂ ಅರ್ಥವಾಗಿರಲಿಲ್ಲ. ಎಲೆಕ್ಷನ್ ಹತ್ತಿರದಲ್ಲಿರೋದ್ರಿಂದ ಈ ಬಾರಿಯೂ ಟೀಕೆ ಎದುರಾಗಬಹುದು. ಆದರೆ ಮಧ್ಯಾಹ್ನ 1.30ರ ಹೊತ್ತಿಗೆ ಶಿವಮೊಗ್ಗದ ಮಲ್ಲಿಕಾರ್ಜುನ್ ಥಿಯೇಟರಿನಲ್ಲಿರುವ ವೇದ ತಂಡ ಅಲ್ಲಿಂದ ನೇರವಾಗಿ ಭದ್ರಾವತಿಗೆ ತೆರಳಲಿದೆ. ಭದ್ರಾವತಿಯ ಸತ್ಯ ಥಿಯೇಟರಿನಲ್ಲಿ ವೇದ ಪ್ರದರ್ಶನವಾಗುತ್ತಿದೆ.

ಶಿವಮೊಗ್ಗ ಮತ್ತು ಭದ್ರಾವತಿ ಯಾತ್ರೆ ಮುಗಿಸಿ ವೇದ ತಂಡ ನೇರವಾಗಿ ತಲುಪುವುದು ತಿಪಟೂರಿಗೆ. ತಿಪಟೂರು ಡಾ.ರಾಜ್ ಅವರ ಪ್ರೀತಿಯ ಊರು. ಇಲ್ಲಿಯೇ ಡಾ.ರಾಜ್ ಅವರ ಪ್ರಾಣಮಿತ್ರ ರಾಮಸ್ವಾಮಿ ಮನೆಯಿದೆ. ಈ ಮನೆಗೆ ಡಾ.ರಾಜ್ ತಮ್ಮ ಕುಟುಂಬದೊಂದಿಗೆ ಬರುತ್ತಿದ್ದರಂತೆ. ಡಾ.ರಾಜ್ ಈಜಾಡುತ್ತಿದ್ದ ಕಲ್ಯಾಣಿಯೂ ಇದೇ ತಿಪಟೂರಿನಲ್ಲಿದೆ.
ರಾಮಸ್ವಾಮಿ ಇವತ್ತಿಗೂ ಡಾ.ರಾಜ್ ಕುಟುಂಬದ ಸಂಪರ್ಕದಲ್ಲಿದ್ದಾರೆ. ಡಾ.ರಾಜ್ ಕುಟುಂಬ ಗೌರವಿಸುವ ಹಿರಿಯ ಜೀವ ಅದು. ಆ ನೆನಪಿನ ಬುತ್ತಿಯೊಂದಿಗೆ ತಿಪಟೂರಿಗೆ ಕಾಲಿಡಲಿರುವ ಶಿವಣ್ಣ, ತ್ರಿಮೂರ್ತಿ ಥಿಯೇಟರಿನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡ್ತಾರೆ.
ಅಲ್ಲಿಂದ ಬಂದು ಸೇರುವುದು ತುಮಕೂರಿಗೆ. ತುಮಕೂರಿನ ಮಾರುತಿ ಥಿಯೇಟರಿನಲ್ಲಿ ವೇದ ಪ್ರದರ್ಶನವಾಗುತ್ತಿದೆ. ತುಮಕೂರಿನೊಂದಿಗೆ ಕೂಡಾ ಡಾ.ರಾಜ್ ಕುಟುಂಬಕ್ಕೆ ಸವಿ ನೆನಪುಗಳಿವೆ. ಗುಬ್ಬಿ ವೀರಣ್ಣ ನಾಟಕ ಮಂಡಳಿ ಇದ್ದದ್ದು ಇದೇ ತುಮಕೂರಿನಲ್ಲಿ. ಡಾ.ರಾಜ್ ತಮ್ಮ ನಾಟಕ ವೃತ್ತಿಯ ಆರಂಭದ ಜೀವನ ಕಳೆದಿದ್ದು ಇದೇ ತುಮಕೂರಿನಲ್ಲಿ. ಡಾ.ರಾಜ್ ಕೆರಿಯರ್‍ನ ಬಂಗಾರದ ಮನುಷ್ಯ, ಮೇಯರ್ ಮುತ್ತಣ್ಣ ಚಿತ್ರಗಳ ನಿರ್ದೇಶಕ ಸಿದ್ದಲಿಂಗಯ್ಯ ತುಮಕೂರಿನವರು. ನರಸಿಂಹ ರಾಜು ಕೂಡಾ ತಮಕೂರಿನವರೇ. ಈ ಎಲ್ಲ ನೆನಪುಗಳ ಮೆರವಣಿಗೆ ಜೊತೆಯಲ್ಲಿಯೇ ಶಿವಣ್ಣ ವೇದ ಯಾತ್ರೆ ತುಮಕೂರಿನಲ್ಲಿ ನಡೆಯಲಿದೆ.



