ಹೀರೋ ಮತ್ತು ಡೈರೆಕ್ಟರ್ ಉಪೇಂದ್ರ. ಚಿತ್ರ ಯು & ಐ. ಲಹರಿ ಸಂಸ್ಥೆ, ವೀನಸ್ ಮತ್ತು ಕೆ.ಪಿ.ಶ್ರೀಕಾಂತ್ ಜೊತೆಗೂಡಿ ನಿರ್ಮಾಣ ಮಾಡುತ್ತಿರುವ ಸಿನಿಮಾ. ದೊಡ್ಡ ಬ್ಯಾನರ್. ಈ ಚಿತ್ರಕ್ಕೀಗ ರೀಷ್ಮಾ ನಾಣಯ್ಯ ನಾಯಕಿ. ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಸೆನ್ಸೇಷನ್ ಯು&ಐ ಚಿತ್ರಕ್ಕೆ ನಾಯಕಿಯಾಗಿರುವ ರೀಷ್ಮಾ ನಾಣಯ್ಯ ಅವರಿಗೆ ಇದು ಬಂಪರ್ ಪ್ರೈಜ್ ಎಂದೇ ಹೇಳಬಹುದು. ಏಕೆಂದರೆ ಈ ಚಿತ್ರಕ್ಕೆ ಉಪ್ಪಿ ಹೀರೋ ಅಷ್ಟೇ ಅಲ್ಲ, ನಿರ್ದೇಶಕರೂ ಹೌದು.

ಮೊದಲ ಚಿತ್ರದಲ್ಲೇ ಏಕ್ ಲವ್ ಯಾದಲ್ಲಿ ಜೋಗಿ ಪ್ರೇಮ್ ಜೊತೆ ಕೆಲಸ ಮಾಡಿದ್ದ ರೀಷ್ಮಾ ನಾಣಯ್ಯ, ಅದಾದ ಮೇಲೆ ರಾಣ ಚಿತ್ರದಲ್ಲಿ ನಟಿಸಿದ್ದರು. ಈಗ ಗೋಲ್ಡನ್ ಸ್ಟಾರ್ ಜೊತೆ ಬಾನ ದಾರಿಯಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೋಗಿ ಪ್ರೇಮ್, ನಂದ ಕಿಶೋರ್, ಪ್ರೀತಮ್ ಗುಬ್ಬಿ ಜೊತೆ ಕೆಲಸ ಮಾಡಿರುವ ರೀಷ್ಮಾ ನಾಣಯ್ಯಗೆ ಉಪ್ಪಿ ಡೈರೆಕ್ಷನ್ ಹೊಸ ಅನುಭವ ಕೊಡಲಿದೆ.
ಯು & ಐ ಚಿತ್ರದಲ್ಲಿ ನಟಿಸುತ್ತಿರುವವರ ಪೈಕಿ ಯು & ಐ ಟೀಂ ಹೊರಬಿಟ್ಟಿರುವ ಕೇವಲ 2ನೇ ಹೆಸರು ರೀಷ್ಮಾ ನಾಣಯ್ಯ ಅವರದ್ದು. ಅಂದ ಹಾಗೆ ಉಪ್ಪಿಗೆ 54 ವರ್ಷ. ರೀಷ್ಮಾ ನಾಣಯ್ಯಗೆ 20 ವರ್ಷ. ಇದನ್ನು ಉಪ್ಪಿ ಹೇಗೆ ಮ್ಯಾಚ್ ಮಾಡ್ತಾರೆ? ಉಪ್ಪಿ ಚಿತ್ರಗಳಲ್ಲಿ ಅದರಲ್ಲೂ ಅವರೇ ನಿರ್ದೇಶನ ಮಾಡಿರುವ ಚಿತ್ರಗಳಲ್ಲ ನಾಯಕಿಗೆ ದೊಡ್ಡ ಅವಕಾಶಗಳಿರುತ್ತವೆ. ಪ್ರೇಮಾ, ಚಾಂದಿನಿ, ದಾಮಿನಿ, ರವೀನಾ ಟಂಡನ್, ನಯನತಾರಾ.. ಹೀಗೆ ಉಪ್ಪಿ ಚಿತ್ರಗಳಲ್ಲಿ ನಟಿಸಿದ ನಾಯಕಿಯರಿಗೆ ದೊಡ್ಡ ರೋಲ್ ಇರುತ್ತದೆ. ರೀಷ್ಮಾ ನಾಣಯ್ಯಗೆ ಯಾವ ರೀತಿ ಪಾತ್ರ..? ಉಪ್ಪಿ ಚಿತ್ರ ರಿಲೀಸ್ ಆದ್ಮೇಲೆ ಎಷ್ಟೋ ಜನರಿಗೆ ಕಥೆಯೇ ಗೊತ್ತಾಗಲ್ಲ. ಇನ್ನು ರಿಲೀಸ್ ಆಗುವುದಕ್ಕೂ ಮುಂಚೆಯೇ ಚಿತ್ರದ ಹೀರೋಯಿನ್ ರೋಲ್ ಎಂಥದ್ದು ಅಂತಾ ಹೇಳೋಕ್ಕಾದ್ರೂ ಆಗುತ್ತಾ..?



