ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಫೆಬ್ರವರಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಗಿದೆ. ಆದರೆ, ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಆಗಮ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿರುವ ದೇಗುಲ. ಉಡುಪಿ ಜಿಲ್ಲೆಯ ದೇಶದಲ್ಲೇ ಪ್ರಸಿದ್ಧಿ ಪಡೆದಿರುವ ಕ್ಷೇತ್ರದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ನಡೆಸುವುದು ವಾಡಿಕೆ. ಆದರೆ ಈ ಬಾರಿ ಕೊಲ್ಲೂರು ದೇವಸ್ಥಾನದಲ್ಲಿ 20 ವರ್ಷಗಳ ನಂತರ ಬ್ರಹ್ಮ ಕಲಶೋತ್ಸವ ನಡೆಸಲು ತೀರ್ಮಾನಿಸಲಾಗಿದೆ.
ವ್ಯವಸ್ಥಾಪನ ಸಮಿತಿಯ ತೀರ್ಮಾನಕ್ಕೆ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಇದು ಆಗಮ ವಿರೋಧಿ ನಿರ್ಧಾರ ಎಂದು ಹೇಳಿದ್ದಾರೆ. ದೇವಸ್ಥಾನದ ಎಲ್ಲಾ ಐವರು ಅರ್ಚಕರೂ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಅಷ್ಟಬಂಧ ಹಾಕಿದ ನಂತರ 48 ದಿನಗಳ ಕಾಲ ಯಾವುದೇ ಧಾರ್ಮಿಕ ಪ್ರಕ್ರಿಯೆಗಳನ್ನು ಮಾಡುವಂತಿಲ್ಲ. ಅಷ್ಟಬಂಧವನ್ನು ಇಷ್ಟ ಬಂದ ಹಾಗೆ ಮಾಡಲು ಸಾಧ್ಯವಿಲ್ಲ ಎನ್ನುವುದು ಇವರ ವಾದ.
ಅಷ್ಟಬಂಧಕ್ಕೆ ವಿರೋಧ ಏಕೆ?
ಫೆಬ್ರವರಿಯಲ್ಲಿ ಅಷ್ಟಬಂಧ ಏರ್ಪಡಿಸಿದರೆ, ಮಾರ್ಚ್ ತಿಂಗಳಲ್ಲಿ ದೇವಸ್ಥಾನದ ವಾರ್ಷಿಕ ಮಹೋತ್ಸವ ನಡೆಯಲಿದೆ. ಒಂದು ವೇಳೆ ಫೆಬ್ರವರಿ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆದರೆ ವಾರ್ಷಿಕೋತ್ಸವ ನಡೆಸಲು ಸಾಧ್ಯವಿಲ್ಲ. ಅಷ್ಟಬಂಧ ಗಟ್ಟಿಯಾಗದೆ ಲಿಂಗಕ್ಕೆ ಕಲಶಾಭಿಷೇಕ ಮಾಡುವಂತಿಲ್ಲ. ಹಾಗಾಗಿ ಒಂದು ಮಂಡಲ ಕಾಲ ಅಂದರೆ 48 ದಿನ ಕಾಯಿಲೇ ಬೇಕು. ಈ ಅವಧಿಯಲ್ಲಿ ದೇವರು ಬಾಲಾವಸ್ಥೆಯಲ್ಲಿ ಇರುತ್ತಾರೆ. ಅದರ ಪರಿಣಾಮ ಉತ್ಸವಾದಿಗಳನ್ನು ಮಾಡಲು ಸಾಧ್ಯವಿಲ್ಲ. ದೃಢ ಸಂಪ್ರೋಕ್ಷಣ್ಯದ ಮೊದಲು ವಾರ್ಷಿಕೋತ್ಸವ ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ. ಕೊಲ್ಲೂರು ದೇವಾಲಯದ ಈ ಎಲ್ಲಾ ಆಚರಣೆಗಳಿಗೆ ವಿಜಯ ಆಗಮ ಪದ್ಧತಿಯೇ ಆಧಾರ. ಆದರೆ ವ್ಯವಸ್ಥಾಪನ ಸಮಿತಿಯವರು ಬೇರೆ ಆಗಮ ಪದ್ಧತಿಯ ಪಂಡಿತರಿಂದ ಸಲಹೆ ಪಡೆದು ಈ ನಿರ್ಧಾರ ಕೈಗೊಂಡಿದ್ದಾರೆ. ವ್ಯವಸ್ಥಾಪನಾ ಸಮಿತಿಯ ನಿರ್ಧಾರಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಅರ್ಚಕರಾದ ಶ್ರೀಧರ ಅಡಿಗ ಹಾಗೂ ನರಸಿಂಹ ಅಡಿಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ.



