ಒಬ್ಬ ವ್ಯಕ್ತಿಯ ಭವಿಷ್ಯ ನಿರ್ಧರಿಸೋದು ಜನ್ಮ ನಕ್ಷತ್ರ, ತಿಥಿ, ಗ್ರಹಗಳ ಚಲನೆ ಮತ್ತಿತರ ಅಂಶಗಳು. ಅದೇ ರೀತಿ ನಿಮ್ಮ ಹುಟ್ಟಿದ ದಿನ ಅಂದರೆ ವಾರವೂ ಅಷ್ಟೇ ಮುಖ್ಯ. ಅದರ ಪರಿಣಾಮ ಒಳ್ಳೆಯದೋ.. ಕೆಟ್ಟದ್ದೋ.. ಪ್ರಭಾವವನ್ನಂತೂ ಬೀರುತ್ತೆ. ಇದು ಬುಧವಾರ ಭೂಮಿಗೆ ಬಂದವರ ಕಥೆ.
ಬುಧವಾರ ಹಿಂದೂ ಧರ್ಮದ ಬುಧನ ದಿನ. ಜ್ಯೋತಿಷ್ಯದ ಪ್ರಕಾರ ಬುಧ ಗ್ರಹ ಅತ್ಯಂತ ಸೌಹಾರ್ದಯುತ ಗ್ರಹ. ಚಂದ್ರನೊಬ್ಬನನ್ನು ಬಿಟ್ಟರೆ ಉಳಿದೆಲ್ಲ ಗ್ರಹಗಳೊಂದಿಗೆ ಬುಧ ಫ್ರೆಂಡ್ಲಿಯಾಗಿರುತ್ತಾನೆ. ಚಂದ್ರನ ಜೊತೆ ಏಕೆ ವೈಮನಸ್ಯ ಅನ್ನೋದನ್ನ ಹೇಳೋಕೆ ಒಂದು ಪುರಾಣ ಕಥೆಯನ್ನೇ ಹೇಳಬೇಕಾದೀತು. ಸಿಂಪಲ್ಲಾಗ್ ಹೇಳ್ಬೇಕಂದ್ರೆ ಬುಧ, ಚಂದ್ರನೊಬ್ಬನನ್ನು ಉಳಿದೆಲ್ಲರ ಜೊತೆ ಒಂದೋ ಸ್ನೇಹಿತನಾಗಿ ಇಲ್ಲವೇ ತಟಸ್ಥನಾಗಿರುತ್ತಾನೆ.
ಬುಧವಾರ ಜನಿಸಿದವರ ವ್ಯಕ್ತಿತ್ವ
ಬುಧ ಎಷ್ಟು ಸ್ನೇಹಪರನೋ.. ಹಾಗೆಯೇ ಬುಧವಾರ ಹುಟ್ಟಿದವರೂ ಕೂಡಾ. ಹೀಗಾಗಿ ಬುಧವಾರ ಹುಟ್ಟಿದವರು ಆಕರ್ಷಕವಾಗಿರುತ್ತಾರೆ. ಸರಳವಾಗಿರುತ್ತಾರೆ. ಆದರೆ, ಅದು ಮೇಲ್ನೋಟಕ್ಕೆ ಮಾತ್ರ. ಅವರ ಮೂಲ ಗುಣ ಬೇರೆಯೇ ಇರುತ್ತೆ. ಸರಳವಾಗಿದ್ದರೂ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ನಡಿಗೆಯಲ್ಲಿ ವೇಗವಿರುತ್ತೆ. ಚಿರತೆಯಂತಾ ನಡಿಗೆ ಎನ್ನಬಹುದು. ಬುಧವಾರ ಜನಿಸಿದ ಪುರುಷರು ಸಾಮಾನ್ಯವಾಗಿ ಮಧ್ಯಮ ಎತ್ತರ ಮತ್ತು ತೆಳ್ಳಗಿನ ಮೈಕಟ್ಟು ಹೊಂದಿರುತ್ತಾರೆ. ಬುಧವಾರ ಜನಿಸಿದ ಮಹಿಳೆಯರು ಸಾಮಾನ್ಯವಾಗಿ ಸರಾಸರಿ ಎತ್ತರವನ್ನು ಹೊಂದಿರುತ್ತಾರೆ. ದಪ್ಪಗಿರುವರು ಅಪರೂಪ. ಹೆಣ್ಣು ಮಕ್ಕಳು ಬುದ್ದಿವಂತರಾಗಿರುತ್ತಾರೆ. ಕಣ್ಣುಗಳೂ ಆಕರ್ಷಕವಾಗಿರುತ್ತವೆ. ಸ್ಲಿಮ್ ಆಗಿರೋಕೆ ಇವರು ಹೆಚ್ಚು ಕಷ್ಟಪಡಬೇಕಿಲ್ಲ. ಬುಧಗ್ರಹದ ಪ್ರಭಾವದಿಂದ ಬುಧವಾರ ಜನಿಸಿದವರು ಹೆಚ್ಚಿನ ಕೌಶಲ್ಯ ಮತ್ತು ಜ್ಞಾನವಂತರಾಗಿರುತ್ತಾರೆ. ಇವರು ಕುಶಲಿಗಳು, ಚಾಣಾಕ್ಷರು.
ಕಷ್ಟ ಎಂದವರಿಗೆ ಕೈಚಾಚುವುದರಲ್ಲಿ ಸದಾ ಮುಂದು. ಸ್ನೇಹಿತರ ಕಷ್ಟಕ್ಕೆ ಸದಾ ಮಿಡಿಯುವ ಹೃದಯ ಇವರದ್ದು. ಇವರ ಕೆಟ್ಟಗುಣವೆಂದರೆ ಸೋಮಾರಿಗಳು. ಹೆಚ್ಚು ಹೆಚ್ಚು ವಿಶ್ರಾಂತಿಯಲ್ಲೇ ಸಂಭ್ರಮ ಪಡುತ್ತಾರೆ. ಹೀಗಾಗಿ ಆಗಾಗ್ಗೆ ಖಿನ್ನತೆಯನ್ನೂ ಅನುಭವಿಸುತ್ತಾರೆ. ಇದರಿಂದಾಗಿ ತಪ್ಪು ನಿರ್ಧಾರ ತೆಗೆದುಕೊಳ್ತಾರೆ. ಸೀರಿಯಸ್ ಆಗಿರುತ್ತಾರೆ. ಆದರೆ ಸ್ಟ್ರೈಟ್ ಫಾರ್ವರ್ಡ್. ದ್ವೇಷ ಇಟ್ಟುಕೊಳ್ಳಲ್ಲ. ಸಿಟ್ಟನ್ನೂ ಅದುಮಿಟ್ಟುಕೊಳ್ಳಲ್ಲ. ಸಿಟ್ಟು ಬಂದಾಗ ಕುತ್ತಿಗೆ ಪಟ್ಟಿಗೆ ಕೈ ಹಾಕೋಕೂ ಸೈ.. ಪ್ರೀತಿ ಉಕ್ಕಿದಾಗ ಕರಡಿಯಂತೆ ಅಪ್ಪಿಕೊಳ್ಳೋಕೂ ಸೈ. ಕ್ಷಮೆ ಇವರ ಗುಣ. ಸಿಟ್ಟು ಹುಟ್ಟುಗುಣ.
ಸವಾಲುಗಳನ್ನು ಇಷ್ಟಡುವ ವ್ಯಕ್ತಿತ್ವದವರು. ಸವಾಲುಗಳನ್ನು ಎದುರಿಸುವುದು, ಗೆಲುವುದು ಇವರಿಗೆ ತುಂಬಾ ಇಷ್ಟ. ಯಾವುದೇ ಕೆಲಸವಾಗಲಿ, ಉತ್ಸಾಹ ತುಂಬಿ ತುಳುಕುತ್ತಿರುತ್ತದೆ. ಕಲೆ, ಕ್ರೀಡೆ, ವಿಶ್ಲೇಷಣೆ, ಕ್ಲರ್ಕು, ಬ್ಯಾಂಕು, ಟೀಚರ್, ಹೆಚ್ಆರ್, ಇನ್ಷೂರೆನ್ಸ್ ಕೆಲಸಗಳಲ್ಲಿ ಉತ್ತಮ ಯಶಸ್ಸು ಕಟ್ಟಿಟ್ಟ ಬುತ್ತಿ. ಇವರ ಲೈಫ್ ಸ್ಟೈಲ್ ಸ್ವಲ್ಪ ದುಬಾರಿ. ಸ್ವಚ್ಚತೆ ಎಂದರೆ ಇವರಿಗೆ ಪ್ರಾಣ. ಕೊಳಕನ್ನು ಇಷ್ಟಪಡುವುದಿಲ್ಲ. ಎಣ್ಣೆ, ಮಸಾಲೆ ಇರೋ ಫುಡ್ ಎಂದರೆ ಇವರ ನಾಲಗೆ ಆಹಾ ಎನ್ನುತ್ತೆ. ಮೊಡವೆ, ಅಜೀರ್ಣ, ವಾಂತಿ ಇವರಿಗೆ ಕಾಮನ್ ಕಾಯಿಲೆ. ಕೆಮ್ಮು, ಕಫ ಇವರ ಜೀವನದುದ್ದಕ್ಕೂ ಕಾಡುತ್ತವೆ.
ಬುಧವಾರದವರ ಲವ್ ಲೈಫು
ಸಂಗಾತಿ ವಿಷಯದಲ್ಲಿ ಅಮರ ಪ್ರೇಮಿ. ಪ್ರೀತಿಸಿದವರು ಸಿಗದೇ ಹೋದರೆ ಮೂಡಿಯಾಗುತ್ತಾರಷ್ಟೇ. ಆದರೆ, ಪ್ರೀತಿಸಿ.. ಪ್ರೀತಿಸಿ.. ಪ್ರೀತಿಯಿಂದಲೇ ಗೆಲ್ಲೋ ತಾಕತ್ತು ಇವರಿಗೆ ಇದೆ. ಸಂಗಾತಿಗೆ ಮೋಸ ಮಾಡಲ್ಲ. ಸದಾ ಜೊತೆ ಜೊತೆಯಲಿ.. ಈ ಬಂಧನ ಜನುಮ ಜನುಮದ ಅನುಬಂಧನ.
ಯಾವ ದೇವರ ಪೂಜೆ ಒಳ್ಳೆಯದು?
ಗಣಪತಿ, ಶಿವ ಮತ್ತು ದುರ್ಗಾದೇವಿಯನ್ನು ಪೂಜಿಸಿದರೆ ಶುಭ. ಯಾವುದೇ ವಿಶೇಷ ಕೆಲಸದ ಮೊದಲು ಗಣೇಶನಿಗೆ ಗರಿಕೆಯನ್ನು ಅರ್ಪಿಸಿ.. ಹಸಿರು ಬಣ್ಣದ ವಸ್ತುಗಳನ್ನು ದಾನ ಮಾಡಿ.ಶಿವನನ್ನು ಪೂಜಿಸಿ ಹಸುಗಳನ್ನು ಆರಾಧಿಸಿ. ಇವರ ಲಕ್ಕಿ ಕಲರ್ ಗ್ರೀನ್. ಹಸಿರೇ ಇವರ ಉಸಿರು. 5 ಲಕ್ಕಿ ನಂಬರ್.



