ಒಬ್ಬ ವ್ಯಕ್ತಿಯ ಭವಿಷ್ಯ ನಿರ್ಧರಿಸೋದು ಜನ್ಮ ನಕ್ಷತ್ರ, ತಿಥಿ, ಗ್ರಹಗಳ ಚಲನೆ ಮತ್ತಿತರ ಅಂಶಗಳು. ಅದೇ ರೀತಿ ನಿಮ್ಮ ಹುಟ್ಟಿದ ದಿನ ಅಂದರೆ ವಾರವೂ ಅಷ್ಟೇ ಮುಖ್ಯ. ಅದರ ಪರಿಣಾಮ ಒಳ್ಳೆಯದೋ.. ಕೆಟ್ಟದ್ದೋ.. ಪ್ರಭಾವವನ್ನಂತೂ ಬೀರುತ್ತೆ. ಇದು ಶನಿವಾರ ಜನಿಸಿದವರ ಕಥೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ದಿನವೂ ಒಂದೊಂದು ಗ್ರಹದೊಂದಿಗೆ ಸಂಬಂಧಿಸಿದೆ. ಆ ಗ್ರಹಗಳು ವ್ಯಕ್ತಿತ್ವ ಮತ್ತು ಜೀವನ ಶೈಲಿಯ ಮೇಲೆ ಪ್ರಭಾವ ಬೀರುತ್ತವೆ. ವಾರದ ಬೇರೆ ಬೇರೆ ದಿನಗಳಲ್ಲಿ ಜನಿಸಿದವರ ಗುಣ ಮತ್ತು ವ್ಯಕ್ತಿತ್ವ ಸದಾ ಬೇರೆ ಬೇರೆ. ಮಂಗಳವಾರ ಜನಿಸಿದವರ ವ್ಯಕ್ತಿತ್ವವೂ ಹಾಗೆ..
ಮಂಗಳ ಗ್ರಹವೇ ಮಂಗಳವಾರಕ್ಕೆ ಮಹಾರಾಜ. ಮಂಗಳ ಗ್ರಹ ಹೇಗೆ ನಿಗೂಢವೋ ಹಾಗೆಯೇ ಮಂಗಳವಾರ ಹುಟ್ಟಿದವರ ವ್ಯಕ್ತಿತ್ವವೂ ನಿಗೂಢ. ಸುಲಭಕ್ಕೆ ಅರ್ಥವಾಗುವವರಲ್ಲ. ಮಂಗಳ ಗ್ರಹವನ್ನು ಕೆಂಪು ಗ್ರಹ ಅಂತಾರೆ. ಅಲ್ಲಿ ದೂಳಿನ ಬಿರುಗಾಳಿ ಓಡುತ್ತಲೇ ಇರುತ್ತೆ. ಮಂಗಳ ಗ್ರಹವಂತರೂ ಹಾಗೆಯೇ. ಸದಾ ಹೋರಾಟ.. ಹೋರಾಟ.. ಹೋರಾಟ..
ಛಲ ಬಿಡದ ಛಲದಂಕಮಲ್ಲರು. ಗೆಲ್ಲುವವರೆಗೂ ಸೋಲಲ್ಲ ಅನ್ನೋ ಮನೋಭಾವದವರು. ಒಂದು ಹೆಜ್ಜೆ ಹಿಂದಿಟ್ಟರೆ ಅದೇ ಮುಂದಿನ ಹೆಜ್ಜೆಗೆ ಶಕ್ತಿ ಎನ್ನುವಂತಹವರು. ಪಾಸಿಟಿವ್ ಆಲೋಚನೆಯಲ್ಲೇ ಮುಳುಗುವವರು. ಮಂಗಳನನ್ನು ಕುಜ ಎಂದೂ ಕರೆಯುತ್ತಾರೆ. ಕುಜ ಗ್ರಹದ ಚಲನೆ ನೇರವಾಗಿರಲ್ಲ. ಸ್ವಲ್ಪ ವಕ್ರ. ಇವರೂ ಹಾಗೆಯೇ. ಹಾಗಂತ ಮಂಗಳವಾರ ಹುಟ್ಟಿದವರಿಗೆಲ್ಲ ಕುಜ ದೋಷವಿರುತ್ತೆ ಎಂದರ್ಥವಲ್ಲ. ಆದರೆ ಮದುವೆ ಅನ್ನೋದು ಇವರನ್ನ ಸತಾಯಿಸಿಯೇ ಆಗೋದು.
ಮದುವೆ ನಿಧಾನಕ್ಕೂ ಕಾರಣವಿದೆ. ಇವರು ಸಂಗಾತಿಯ ಜೊತೆ ಮಾತೇ ಆಡಲ್ಲ. ಧೈರ್ಯವಂತರು ಹೌದಾದರೂ ಸಂಗಾತಿಯ ಮುಂದೆ ನಾಚಿಕೆಯಿಂದಲೇ ನಡುಗಿ ಹೋಗ್ತಾರೆ. ಸಂಕೋಚದಲ್ಲೆ ಮುದುಡಿ ಹೋಗ್ತಾರೆ. ಪ್ರೀತಿ-ಪ್ರೇಮ-ಪ್ರಣಯದಲ್ಲಿನ ಇವರ ಮೌನವೇ ಇವರ ಶತ್ರು. ಅರ್ಥಗಳೆಲ್ಲ ಅಪಾರ್ಥವಾಗುವುದೇ ಹೆಚ್ಚು. ಹೀಗಾಗಿ ನೋವು ಕಟ್ಟಿಟ್ಟ ಬುತ್ತಿ. ಆದರೆ ಸಂಗಾತಿಗೆ ಇವರು ಭೀಮನಂತೆ. ಎಂಥದ್ದೇ ಕಷ್ಟ ಬಂದರೂ ಕೈ ಬಿಡಲ್ಲ. ಸಂಗಾತಿಯೇ ದೂರವಿಟ್ಟರೂ, ಇವರು ಮಾತ್ರ ದೂರ ಇಡಲ್ಲ. ಒಮ್ಮೆ ಇವರ ಸಂಗಾತಿಗೆ ಇವರ ಕರಡಿ ಪ್ರೀತಿ ಅರ್ಥವಾಗಯಿತೊ.. ಬಾಳೆಲ್ಲ ಶೃಂಗಾರ ಕಾವ್ಯ.
ಮಂಗಳವಾರ ಹುಟ್ಟಿದವರ ವಿಶೇಷತೆಯೇ ಇವರ ಕೋಪ ಮತ್ತು ಧೈರ್ಯ. ಅದರಿಂದಾಗಿಯೇ ಕಷ್ಟ ಅನುಭವಿಸುತ್ತಾರೆ. ಕೋಪ ಕೆಲವು ಬಾರಿ ಆಪ್ತರಕ್ಷಕನಂತೆ ಇವರನ್ನು ರಕ್ಷಿಸುತ್ತದೆ.ಅದೇ ಕೋಪ ಇವರ ವೈಫಲ್ಯಕ್ಕೂ ಕಾರಣವಾಗುತ್ತದೆ. ಕುಹಕ, ವ್ಯಂಗ್ಯವನ್ನು ಎದುರಿಸಿ.. ಎದುರಿಸೀ.. ಇವರ ಮಾತಿನಲ್ಲೂ ಅದು ನುಸುಳಿ ಬಿಡುತ್ತದೆ. ಅದನ್ನು ಕಂಟ್ರೋಲ್ ಮಾಡಿಕೊಂಡರೆ ಇವರ ಲೈಫು ಅದ್ಭುತವಾಗಿರುತ್ತದೆ.
ಬ್ಯಾಂಕಿಂಗ್ ಮತ್ತು ಫೈನಾನ್ಸ್ ಇವರ ವೃತ್ತಿಯ ಕ್ಷೇತ್ರಗಳು. ಇವರಿಗೆ ಕೆಲಸ ವಹಿಸಿದರೆ ಕೆಲಸ ಆಗಲ್ಲ. ಇವರಿಗೆ ಚಾಲೆಂಜ್ ಹಾಕಬೇಕು. ಆಗ ಗೆಲ್ಲೋದು ಇವರೇ. ಹನುಮಂತನಿಗೆ ತನ್ನ ಶಕ್ತಿಯ ಅರಿವೇ ಇರಲಿಲ್ಲವಂತೆ. ಆ ಶಕ್ತಿ ನಿನ್ನಲ್ಲಿದೆ ಎಂದು ಆಂಜನೇಯನಿಗೆ ತಿಳಿಸಿಕೊಟ್ಟವನು ಜಾಂಬವಂತ. ಹಾಗೆ.. ಜಾಂಬವಂತ ಹನುಮನಿಗೆ ಶಕ್ತಿ ತುಂಬಿದಂತೆ ಇವರಿಗೆ ಶಕ್ತಿ ತುಂಬುತ್ತಲೇ ಇರಬೇಕು.
ಹನುಮನಂತೆ ಎಂದ ಕೂಡಲೇ ಪರಮಭಕ್ತರೆಂದುಕೊಳ್ಳಬೇಡಿ. ಇವರು ದೇವರನ್ನೂ ಕ್ವಶ್ಚನ್ ಹಾಕಿಯೇ ನಂಬೋ ಜಾತಿಯವರು. ಭಕ್ತಿ ಇದ್ದರೆ ಇದ್ದೀತು. ಭಕ್ತಿ ಇಲ್ಲದಿದ್ದರೂ ಆಯಿತು. ನಾಸ್ತಿಕರಲ್ಲ. ಆಸ್ತಿಕರೂ ಅಲ್ಲ.
ಮಂಗಳವಾರ ಜನಿಸಿದವರಿಗೆ 9 ಅದೃಷ್ಟ ಸಂಖ್ಯೆ. 9 ರಂದು ಶುಭ ಸಮಾರಂಭ ಮತ್ತು ಹೊಸ ಉದ್ಯಮ ಆರಂಭಿಸಿದರೆ ಮಂಗಳವಾಗಲೀ ಸರ್ವರಿಗೆ ಎನ್ನುವಂತೆ ಎಲ್ಲವೂ ಮಂಗಳವೇ. ಮಂಗಳವಾರ ಹುಟ್ಟಿದವರು ಮಂಗಳವಾರ ದಾನ ಧರ್ಮ ಮಾಡಿದರೆ ಒಳ್ಳೆಯದು.



