ಒಬ್ಬ ವ್ಯಕ್ತಿಯ ಭವಿಷ್ಯ ನಿರ್ಧರಿಸೋದು ಜನ್ಮ ನಕ್ಷತ್ರ, ತಿಥಿ, ಗ್ರಹಗಳ ಚಲನೆ ಮತ್ತಿತರ ಅಂಶಗಳು. ಅದೇ ರೀತಿ ನಿಮ್ಮ ಹುಟ್ಟಿದ ದಿನ ಅಂದರೆ ವಾರವೂ ಅಷ್ಟೇ ಮುಖ್ಯ. ಅದರ ಪರಿಣಾಮ ಒಳ್ಳೆಯದೋ.. ಕೆಟ್ಟದ್ದೋ.. ಪ್ರಭಾವವನ್ನಂತೂ ಬೀರುತ್ತೆ. ಇದು ಶನಿವಾರ ಜನಿಸಿದವರ ಕಥೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ದಿನವೂ ಒಂದೊಂದು ಗ್ರಹದೊಂದಿಗೆ ಸಂಬಂಧಿಸಿದೆ. ಆ ಗ್ರಹಗಳು ವ್ಯಕ್ತಿತ್ವ ಮತ್ತು ಜೀವನ ಶೈಲಿಯ ಮೇಲೆ ಪ್ರಭಾವ ಬೀರುತ್ತವೆ. ವಾರದ ಬೇರೆ ಬೇರೆ ದಿನಗಳಲ್ಲಿ ಜನಿಸಿದವರ ಗುಣ ಮತ್ತು ವ್ಯಕ್ತಿತ್ವ ಸದಾ ಬೇರೆ ಬೇರೆ. ಗುರುವಾರ ಜನಿಸಿದವರ ವ್ಯಕ್ತಿತ್ವವೂ ಹಾಗೆ..
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರುವಾರದ ಅಧಿಪತಿ ಗುರು ಗ್ರಹ. ಗುರು ಎಂದರೆ ಶುಭ. ಮಂಗಳಕರ. ಜೀವನದಲ್ಲಿ ಸುಖ ಸಂತೋಷ ತರುವ ಶಕ್ತಿ ಗುರುವಿಗೆ ಇದೆ. ಹೀಗಾಗಿಯೇ ಗುರುವಾರ ಜನಿಸಿದವರನ್ನು ಅದೃಷ್ಟವಂತರು ಎಂದು ಪರಿಗಣಿಸ್ತಾರೆ.
ಗುರುವಾರ ಜನಿಸಿದವಿಗೆ ಗುರುವಿನ ವಿಶೇಷ ಅನುಗ್ರಹವಿರುತ್ತದೆ. ಇವರು ಜೀವನದಲ್ಲಿ ದೊಡ್ಡ ಗುರಿ ಮತ್ತು ಆಕಾಂಕ್ಷೆಗಳನ್ನ ಹೊಂದಿದವರು. ಬುದ್ಧಿವಂತರು. ಸಾಧನೆಗಾಗಿ ಹಂಬಲಿಸುವ, ಶ್ರಮಿಸುವ ಕಟ್ಟಕಡೆಯ ಕ್ಷಣದವರೆಗೂ ಹಠ ಬಿಡದವರು. ಇವರಿಗೆ ಸೋಲು ಎಂದರೆ ಅಲರ್ಜಿ. ಸೋತರೂ.. ಸುಮ್ಮನೆ ಕೂರುವವರಲ್ಲ. ಸೋಲಿನ ಕಾರಣ ಹುಡುಕತೊಡಗುತ್ತಾರೆ. ತಿದ್ದಿಕೊಳ್ಳುತ್ತಾರೆ. ಮತ್ತೆ ಅದೇ ಹುಮ್ಮಸ್ಸು. ಸದಾ ಪಾಸಿಟಿವ್ ಆಗಿಯೇ ಯೋಚಿಸುತ್ತಾರೆ. ಬದುಕುತ್ತಾರೆ. ಎಷ್ಟು ಹೋರಾಟಗಾರರೋ ಅಷ್ಟೇ ದೈವಭಕ್ತರು. ಧ್ಯಾನ, ಯೋಗ, ಸಂಗೀತವನ್ನು ಇಷ್ಟಪಡುತ್ತಾರೆ.
ಇವರಲ್ಲಿ ನಾಯಕತ್ವದ ಗುಣ ಹುಟ್ಟಿನಿಂದಲೇ ಬಂದಿರುತ್ತೆ. ಆಶಾವಾದಿ ಮನೋಭಾವದವರು. ಇವರಿಗೆ ತಂಡವನ್ನು ಕಟ್ಟುವುದು ಹಾಗೂ ಎಲ್ಲರನ್ನೂ ಮುನ್ನಡೆಸುವುದು ಚೆನ್ನಾಗಿ ಗೊತ್ತು. ತಮ್ಮ ಮಾತಿನಲ್ಲಿ ಸದಾ ಸ್ಫೂರ್ತಿ ತುಂಬುವವರು. ಹೀಗಾಗಿಯೇ ಇವರು ಮ್ಯಾನೇಜರ್, ಟೀಚರ್, ರಾಜಕಾರಣಿ, ಮಾರ್ಕೆಟಿಂಗ್.. ಹೀಗೆ ಯಾವುದೇ ಇರಲಿ, ಗೆಲ್ಲುತ್ತಾರೆ. ಕ್ರಿಯೇಟಿವಿಟಿ ಇವರ ಇನ್ನೊಂದು ಶಕ್ತಿ. ಹೊಸ ಹೊಸ ಐಡಿಯಾಗಳನ್ನು ಸದಾ ಜೇಬಲ್ಲಿಟ್ಟುಕೊಂಡಿರುತ್ತಾರೆ.
ಲವ್ ಲೈಫೂ ಫುಲ್ ಲಾಜಿಕ್ಕು..!
ಪ್ರೀತಿಯಿಂದ ಬದುಕುತ್ತಾರೆ. ಆದರೆ ಭಾವನೆಗಳು ಕಡಿಮೆ. ತೋರಿಸಿಕೊಳ್ಳುವವರಲ್ಲ. ಪ್ರೀತಿಯಾಗಲಿ, ಕೋಪವಾಗಲಿ.. ಒಳಗೇ ಇಟ್ಟುಕೊಳ್ತಾರೆ. ಆದರೆ ಸಂಗಾತಿಗೆ ನಿಷ್ಠರಾಗಿರುತ್ತಾರೆ. ಎಂಥದ್ದೇ ಸಂದರ್ಭದಲ್ಲೂ ಪ್ರೀತಿಸಿದವರನ್ನು ಕೈಬಿಡಲ್ಲ. ಸಂಗಾತಿಯನ್ನಷ್ಟೇ ಅಲ್ಲ, ಸ್ನೇಹಿತರನ್ನೂ ಕೂಡಾ ಮರೆಯಲ್ಲ.
ಗುರುವಾರ ಜನಿಸಿದವರಿಗೆ ಬೆಂಕಿಯೇ ಸ್ಫೂರ್ತಿ. ಅಗ್ನಿದೇವ ಇವರ ದೇಹದ ಕಣಕಣದಲ್ಲೂ ಇರುತ್ತಾನೆ. ಕೋಪ ಸಡನ್ ಆಗಿ ಬರುತ್ತೆ. ಹೀಗಾಗಿ ವಿವಾದಗಳೂ ಇವರನ್ನು ಬೆನ್ನತ್ತಿಕೊಂಡು ಬರುತ್ತವೆ. ಆರ್ಥಿಕ ಚಿಂತನೆಯೇ ಇವರ ಮೊದಲ ಗುರಿ. ನಂತರವೇ ಪ್ರೀತಿ, ಪ್ರೇಮ, ಭಾವನೆ ಎಲ್ಲ. ರೊಮ್ಯಾಂಟಿಕ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಆರೋಗ್ಯವೂ ವಂಡರ್ಫುಲ್. ಇಷ್ಟವಾಗಿದ್ದನ್ನೆಲ್ಲ ಮಾಡುತ್ತಾರೆ. ಇವರು ಹದ ತಪ್ಪುವುದು ತಿನ್ನುವ ವಿಷಯದಲ್ಲಿ ಮಾತ್ರ. ನಾಲಗೆ ಹೇಳಿದಂತೆ ತಿನ್ನುವವರು. ಹೀಗಾಗಿ ಡುಮ್ಮಣ್ಣ/ಡುಮ್ಮಿಣಿಯಾಗಿರುತ್ತಾರೆ. ಹೊಟ್ಟೆಯ ಆರೋಗ್ಯ ಇವರಿಗೆ ಕೈ ಕೊಡ್ತಾನೆ ಇರುತ್ತೆ.
ಮಾತನ್ನು ಮುತ್ತಿನಂತೆ ಬಳಸುವ ಚತುರರು. ಇನ್ನೊಬ್ಬರ ಸಹಾಯವನ್ನು ಕೇಳೋಕೆ ಹಿಂಜರಿಯುವವರು. ಯಾರ ಸಹಾಯವನ್ನೂ ಪಡೆಯದೆ ಏಕಾಂಗಿಯಾಗಿ ಗೆಲ್ಲುವುದು ಇವರಿಗೆ ಇಷ್ಟ. ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ಎತ್ತಿದ ಕೈ. ಥ್ಯಾಂಕ್ಸ್ ಹೇಳೋಕೆ ಹಿಂದೆ ಮುಂದೆ ನೋಡ್ತಾರೆ. ಆದರೆ ತಾವು ಮಾಡಿದ ಸಹಾಯಕ್ಕೆ ಥ್ಯಾಂಕ್ಸ್ ಕೇಳೋದನ್ನ ಇಷ್ಟಪಡ್ತಾರೆ. ಲಕ್ಕಿ ನಂಬರ್ 3.



