ಒಬ್ಬ ವ್ಯಕ್ತಿಯ ಭವಿಷ್ಯ ನಿರ್ಧರಿಸೋದು ಜನ್ಮ ನಕ್ಷತ್ರ, ತಿಥಿ, ಗ್ರಹಗಳ ಚಲನೆ ಮತ್ತಿತರ ಅಂಶಗಳು. ಅದೇ ರೀತಿ ನಿಮ್ಮ ಹುಟ್ಟಿದ ದಿನ ಅಂದರೆ ವಾರವೂ ಅಷ್ಟೇ ಮುಖ್ಯ. ಅದರ ಪರಿಣಾಮ ಒಳ್ಳೆಯದೋ.. ಕೆಟ್ಟದ್ದೋ.. ಪ್ರಭಾವವನ್ನಂತೂ ಬೀರುತ್ತೆ. ಇದು ಶನಿವಾರ ಜನಿಸಿದವರ ಕಥೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ದಿನವೂ ಒಂದೊಂದು ಗ್ರಹದೊಂದಿಗೆ ಸಂಬಂಧಿಸಿದೆ. ಆ ಗ್ರಹಗಳು ವ್ಯಕ್ತಿತ್ವ ಮತ್ತು ಜೀವನ ಶೈಲಿಯ ಮೇಲೆ ಪ್ರಭಾವ ಬೀರುತ್ತವೆ. ವಾರದ ಬೇರೆ ಬೇರೆ ದಿನಗಳಲ್ಲಿ ಜನಿಸಿದವರ ಗುಣ ಮತ್ತು ವ್ಯಕ್ತಿತ್ವ ಸದಾ ಬೇರೆ ಬೇರೆ. ಸೋಮವಾರ ಜನಿಸಿದವರ ವ್ಯಕ್ತಿತ್ವವೂ ಹಾಗೆ..
ಸೋಮವಾರಕ್ಕೆ ಚಂದ್ರನೇ ಅಧಿಪತಿ. ಇವರ ಅದೃಷ್ಟ ಸಂಖ್ಯೆ 2. ಚಂದ್ರ ಎಂದರೆ ಹುಣ್ಣಿಮೆ ಚಂದ್ರನಂತೆಯೇ ಸುಂದರ. ಚಂಚಲ. ಸೊಗಸುಗಾರ.. ಮಾತುಗಾರ. ಹೀಗಾಗಿ ಸೋಮವಾರ ಹುಟ್ಟಿದವರೂ ಅಷ್ಟೆ.. ಮಾತಿನ ಮಲ್ಲರು. ಶೃಂಗಾರ ಚತುರರೂ ಆಗಿರುತ್ತಾರೆ. ಇವರಿದ್ದ ಕಡೆ ತಂಪು ತಂಪು ಕೂಲ್ ಕೂಲ್. ಕೆಲಸ ಮತ್ತು ಯೋಚನೆ ಸದಾ ಬದಲಾಗುತ್ತಿರುತ್ತೆ. ಕನಸು ಕಾಣುವುದೇ ಇವರ ಕಾಯಕ. ಕನಸೇ ಇಲ್ಲದ ಜೀವನ ನಮಗ್ಯಾಕೆ ಅನ್ನೋ ಜಾತಿಯವರು ಸೋಮವಾರ ಹುಟ್ಟಿದವರು. ಸೋಮವಾರ ಜನಿಸಿದವರು ಹುಡುಗನಾಗಲೀ, ಹುಡುಗಿಯಾಗಲೀ.. ಪ್ರೀತಿಗೆ ಬರವಿಲ್ಲ. ಪ್ರೀತಿಯನ್ನು ಪ್ರೇಮಿಸಿದವರಿಗೆ ಮೊಗೆ ಮೊಗೆದು ಕೊಡುತ್ತಾರೆ. ತಾಯಿಯನ್ನು ಹೆಚ್ಚು ಪ್ರೀತಿಸುವವರು.
ಮನಸ್ಸು ಚಂಚಲ. ಆ ಚಂಚಲ ಮನಸ್ಸಿನ ಕನಸುಗಳನ್ನು ನನಸು ಮಾಡಿಕೊಳ್ಳೋಕೆ ಏನೇ ಕಷ್ಟ ಬಂದರೂ ಶ್ರಮಿಸುತ್ತಾರೆ. ವಾಕ್ ಚಾತುರ್ಯದಲ್ಲಿ ಇವರಿಗೆ ಸರಿಸಾಟಿಯೇ ಇಲ್ಲ. ಶತ್ರುವನ್ನೂ ಮಾತಿನಲ್ಲಿ ಮರುಳು ಮಾಡೋ ಪಟಾಯಿಸಿಕೊಳ್ಳೋ ಕಲೆ ಇವರಿಗೆ ರಕ್ತಗತ. ತಿಳುವಳಿಕೆ ಕಡಿಮೆ. ಆದರೆ ಒಪ್ಪಿಕೊಂಡ ಕೆಲಸ ಮಾತ್ರ ಆಗೋದು ಪಕ್ಕಾ. ನೂರಕ್ಕೆ ನೂರರಷ್ಟು ಮಾಡಿಯೇ ಮಾಡ್ತಾರೆ.
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಅನ್ನೋದು ಪಂಚೇಂದ್ರಿಯಗಳ ಗುಣ. ನಂಬಿ ಸ್ನೇಹ ಮಾಡಿಕೊಳ್ಳೋದು ಕಷ್ಟ. ಒಮ್ಮೆ ನಂಬಿ ಸ್ನೇಹ ಮಾಡಿದರೋ ಪ್ರಾಣಕ್ಕೆ ಪ್ರಾಣ ಕೊಡ್ತಾರೆ. ಸೋಮವಾರ ಹುಟ್ಟಿದವರಿಗಿಂತ, ಸೋಮವಾರ ಹುಟ್ಟಿದವರ ಜೊತೆ ಸ್ನೇಹ, ಸಂಬಂಧ ಇಟ್ಟುಕೊಂಡವರು ಪುಣ್ಯವಂತರು. ಕುಟುಂಬದವರು ಇನ್ನೂ ಲಕ್ಕಿ. ಸೋಮವಾರ ಹುಟ್ಟಿದವರನ್ನು ಮದುವೆಯಾದರೂ ಇನ್ನೂ ಇನ್ನೂ ಇನ್ನೂ ಲಕ್ಕಿ. ಜೀವ ಕೊಡ್ತಾರೆಯೇ ಹೊರತು ಸಂಬಂಧ ಮುರಿದುಕೊಳ್ಳಲ್ಲ. ಜಗಳ ಎಂದರೆ ದೂರ ದೂರ. ಇವರನ್ನು ನೋಡಿಯೇ ಮಾತುಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಹುಟ್ಟಿತೇನೋ ಎಂಬಂತೆ ಇವರು ಮೌನದಲ್ಲಿ, ತಣ್ಣಗಿದ್ದುಕೊಂಡೇ ಎಲ್ಲವನ್ನೂ ಗೆಲ್ತಾರೆ.
ಹೊಸದು ಎಂದರೆ ಇಷ್ಟ. ಹೊಸ ಕೆಲಸ, ಹೊಸ ಕೌಶಲ್ಯ, ಹೊಸ ಉದ್ಯೋಗ ಎಲ್ಲ ಇಷ್ಟ. ಇವರಿಗೆ ಬಾಸ್ ಆಗಿದ್ದರೆ ಬಾಸ್ ಆದವರು ನಿರಾಳರಾಗಬಹುದು. ಕಿತ್ತೂರು ಚೆನ್ನಮ್ಮನಿಗೆ ರಾಯಣ್ಣ ಹೇಗಿದ್ದನೋ.. ಅಷ್ಟು ನಂಬುಗೆಯವರಾಗಿರುತ್ತಾರೆ. ಮಾತುಗಾರ ಹೌದಾದರೂ ಒಂಟಿತನ ಇಷ್ಟಪಡುವವರು. ಕನಸಿನಲ್ಲಿ ಪ್ರಸ್ತುತತೆಯನ್ನೇ ಮರೆಯುವವರು.
ಚಂದಮಾಮನ ಬಣ್ಣ ಬಿಳಿ. ಇವರ ಅದೃಷ್ಟವಿರೋದು ಶ್ವೇತ ವರ್ಣದಲ್ಲೇ. ವ್ಯಾಪಾರವಾಗಲೀ, ಉದ್ಯಮವಾಗಲೀ ಅಲ್ಲಿ ಬಿಳಿಯಿರಬೇಕು. ವೈಟ್ ಈಸ್ ವಿಕ್ಟರಿ. ಕಾಫಿ ಟೀ ಮುಂತಾದ ಅಂಗಡಿಯಿದ್ದರೆ, ಹಾಲು, ಮೊಸರು ವ್ಯವಹಾರವಾಗಿದ್ದರೆ, ಪೇಪರ್ ಉದ್ಯಮವಾಗಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿ. ಸರಸ್ವತಿ ಇವರಿಗೆ ತಾಯಿಯಿದ್ದಂತೆ. ವಿದ್ಯೆಯ ಆಶೀರ್ವಾದ ಸದಾ ಇರುತ್ತೆ. ಸಿನಿಮಾ, ನಾಟಕಗಳಲ್ಲೂ ಭವಿಷ್ಯ ಇದೆ. ವ್ಯವಸಾಯವಂತೂ ಇವರಿಗೆ ಹೇಳಿ ಮಾಡಿಸಿದ್ದು.
ನವಗ್ರಹ ಪೂಜೆ ಮಾಡುವಾಘ ಸೂರ್ಯನಿಗೆ ಒಂದು ಸಲ ಹೆಚ್ಚಾಗಿಯೇ ಕೈಮುಗೀರಿ. ಚಂದ್ರನ ಶಕ್ತಿಯೇ ಸೂರ್ಯ. ಗಾಯತ್ರಿ ಮಂತ್ರ, ಗಣಪತಿ ಉಪಾಸನೆ ತಪ್ಪಿಸಲೇಬೇಡಿ.



