ಮೊದಲು ಒಂದೆರಡು ಕಥೆ ಹೇಳಿಬಿಡುತ್ತೇವೆ. ಮೊದಲ ಕಥೆ : ವೈಕುಂಠದಲ್ಲಿ ಲಕ್ಷ್ಮಿ ದೇವಿಯ ವಿಭಿನ್ನ ಸ್ವರೂಪಗಳಾದ ದರಿದ್ರ ಲಕ್ಷ್ಮಿ ಮತ್ತು ಸೌಭಾಗ್ಯ ಲಕ್ಷ್ಮಿಯರ ಮಧ್ಯೆ ಜಗಳವಾಗುತ್ತೆ. ಯಾರು ಶ್ರೇಷ್ಟರು ಎಂಬುದೇ ಅವರಿಬ್ಬರ ನಡುವಿನ ಜಗಳಕ್ಕೆ ಕಾರಣ. ಆಗ ಅವರು ಶ್ರೀಮಂತನೂ ಬುದ್ದಿವಂತನೂ ಆದ ಒಬ್ಬ ವ್ಯಾಪಾರಿಯ ಮನೆ ಬಾಗಿಲು ತಟ್ಟುತ್ತಾರೆ. ತಮ್ಮ ಪರಿಚಯ ಹೇಳಿಕೊಂಡು ಯಾರು ಶ್ರೇಷ್ಟರು ಹೇಳು ಎಂದು ಕೇಳುತ್ತಾರೆ. ಜೊತೆಗೆ ತಮ್ಮನ್ನು ಶ್ರೇಷ್ಟ ಎನ್ನದೇ ಹೋದರೆ ನಿನಗೆ ಶಾಪ ಗ್ಯಾರಂಟಿ ಎಂಬ ಎಚ್ಚರಿಕೆಯನ್ನೂ ಕೊಡುತ್ತಾರೆ. ವ್ಯಾಪಾರಿಗೋ ಧರ್ಮ ಸಂಕಟ. ಅತ್ತ ಶಾಪಕ್ಕೂ ಗುರಿಯಾಗಬಾರದು. ಇತ್ತ ಇಬ್ಬರೂ ಸಂತೃಪ್ತರಾಗಬೇಕು. ಆಗ ಆ ಬುದ್ದಿವಂತ ಹೇಳುತ್ತಾನೆ. ದರಿದ್ರ ಲಕ್ಷ್ಮಿ ಯಾವುದೇ ಮನೆಗೆ ಬೆನ್ನು ತೋರಿಸಿ ಹೋಗುತ್ತಿದ್ದರೆ ಶ್ರೇಷ್ಟ ಹಾಗೂ ಸೌಭಾಗ್ಯ ಲಕ್ಷ್ಮಿ ಮುಂದಡಿಯಿಟ್ಟು ಮನೆಯೊಳಗೆ ಬರುತ್ತಿದ್ದರೆ ಶ್ರೇಷ್ಟ ಎನ್ನುತ್ತಾನೆ. ಆಗ ಇಬ್ಬರೂ ಸಂತೃಪ್ತರಾಗುತ್ತಾರೆ ಎನ್ನುವುದು ಕಥೆ.
ಇನ್ನು ಮಾರ್ವಾಡಿಗಳ ಮನೆಯಲ್ಲಿ ಲಕ್ಷ್ಮಿಗೆ ಅರಿಶಿನ ಕುಂಕುಮವನ್ನೇ ಕೊಡದೆ ಕಟ್ಟಿ ಹಾಕಿದ್ದಾರೆ. ಅದಕ್ಕೇ ಅವರು ಶ್ರೀಮಂತರು ಎನ್ನುವುದಕ್ಕೂ ಚಿತ್ರ ವಿಚಿತ್ರ ಕಥೆಗಳಿವೆ. ಇವು ಕಥೆಗಳು ಮಾತ್ರ. ಸತ್ಯವಲ್ಲ. ಹಾಗಾದರೆ ಮನೆಗೆ ಲಕ್ಷ್ಮಿ ಹೇಗಿರಬೇಕು. ಪ್ರತಿಯೊಬ್ಬರಲ್ಲೂ ಲಕ್ಷ್ಮಿಯಿರುತ್ತಾಳೆ. ಆಕೆಯನ್ನು ನಾವು ಬಳಸಿಕೊಂಡು ಬೆಳೆಸಿಕೊಳ್ಳಬೇಕಷ್ಟೆ.
ತಾಳ್ಮೆಯಿದ್ದ ಕಡೆ ಲಕ್ಷ್ಮಿ : ಇದಕ್ಕೂ ಒಂದು ಕಥೆಯಿದೆ. ಒಂದು ಮನೆಯಲ್ಲಿ ಐವರು ಸಹೋದರರು ಮತ್ತು ಅವರ ಪತ್ನಿಯರಿರುತ್ತಾರೆ. ಎಲ್ಲರೂ ಒಟ್ಟಿಗೆ ಅಡುಗೆ ಮಾಡುತ್ತಿರುತ್ತಾರೆ. ಒಮ್ಮೆ ಅಡುಗೆ ಮಾಡುತ್ತಿರುವಾಗ ಹೊರಗೆ ನಾಟಕವೊಂದು ನಡೆಯುತ್ತಿರುತ್ತದೆ. ಆಗಾಗ್ಗೆ ಹೊರಗೆ ಹೋಗಿ ನಾಟಕವನ್ನೂ ನೋಡಿಕೊಂಡು ಇತ್ತ ಅಡುಗೆಯನ್ನೂ ಮಾಡುತ್ತಿರುತ್ತಾರೆ ಮನೆಯ ಸೊಸೆಯಂದಿರು. ಆಗ ಅವರು ಹಾಕಿಲ್ಲ ಎಂದುಕೊಂಡು ಇವರು, ಇವರು ಹಾಕಿಲ್ಲ ಎಂದುಕೊಂಡು ಅವರು ತಲಾ ಒಮ್ಮೆ ಉಪ್ಪು ಹಾಕಿಬಿಡುತ್ತಾರೆ. ಆದರೆ ಊಟ ಬಡಿಸುವಾಗ ಮನೆಯ ಗಂಡಸರು ಒಬ್ಬರ ಮುಖ ಒಬ್ಬರು ನೋಡಿಕೊಂಡು, ಉಪ್ಪು ಜಾಸ್ತಿಯಾಗಿದೆ ಎಂದಷ್ಟೇ ಹೇಳಿ ನಗು ನಗುತ್ತಲೇ ಊಟ ಮಾಡುತ್ತಾರೆ. ಅಂತಹದರಲ್ಲು ತಾಳ್ಮೆ ಕಳೆದುಕೊಳ್ಳದ ಅವರನ್ನು ನೋಡಿದ ಲಕ್ಷ್ಮಿ ಇದೇ ನಾನು ನೆಲೆಯೂರಲು ಸರಿಯಾದ ಮನೆ ಎಂದು ನೆಲೆಸುತ್ತಾಳೆ. ಇದರಿಂದ ಅರ್ಥವಾಗಬೇಕಾದ್ದು ಇಷ್ಟೆ. ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರಬೇಕು. ಶಾಂತಿ, ನೆಮ್ಮದಿ,ಸಂತೋಷ ಇದ್ದ ಕಡೆ ಲಕ್ಷ್ಮಿ ಖಂಡಿತಾ ಇರುತ್ತಾಳೆ.
ಧರ್ಮವಿದ್ದ ಕಡೆ ಲಕ್ಷ್ಮಿ : ನಿಮಗೆ ಮಹಾಭಾರತ ಗೊತ್ತು. ಐಶ್ವರ್ಯ ಹಸ್ತಿನಾಪುರದಲ್ಲಿದ್ದರೂ ನೆಮ್ಮದಿ ಪಾಂಡವರ ಮನೆಯಲ್ಲಿತ್ತು. ಮಹಾಭಾರತದ ಒಂದು ಕಡೆ ರಾಜ್ಯ ಮತ್ತು ರಾಜ್ಯಭಾರದ ಆಸೆಯಿಲ್ಲದೆ ಕಾಡಿನಲ್ಲಿದ್ದಾಗಲೇ ನಾವು ಸುಖವಾಗಿದ್ದೆವು ಎನ್ನುತ್ತಾಳೆ ಕುಂತಿ. ಇನ್ನು ಕುರುಕ್ಷೇತ್ರದಲ್ಲಿ ಜಯಲಕ್ಷ್ಮಿ ಒಲಿದಿದ್ದು ಹಾಗೂ ಸಾಮ್ರಾಜ್ಯ ಸಿಕ್ಕಿದ್ದು ಧರ್ಮದಿಂದ ನಡೆದ ಪಾಂಡವರಿಗೇ ಹೊರತು ಅರ್ಧಮನ್ನನುಸರಿಸಿದ ಕೌರವವರಿಗೆ ಅಲ್ಲ.
ಧರ್ಮಗ್ರಂಥಗಳ ಪ್ರಕಾರ, ಧಾರ್ಮಿಕ ಮಹಿಳೆ ಮನೆಯಲ್ಲಿ ಸಮೃದ್ಧಿಯ ಅಂಶವಾಗಿರುತ್ತಾಳೆ. ಧರ್ಮವನ್ನು ಅನುಸರಿಸುವ ಮಹಿಳೆಯರಿಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ಹೇಗೆ ಪ್ರತ್ಯೇಕಿಸುವುದು ಎಂಬುದು ಚೆನ್ನಾಗಿ ತಿಳಿದಿರುತ್ತದೆ. ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೂ ಸರಿಯಾದ ಮಾರ್ಗವನ್ನು ಆಕೆ ತೋರಿಸುತ್ತಾಳೆ. ಧರ್ಮದ ಮಾರ್ಗದಲ್ಲಿ ನಡೆಯುವ ಮಹಿಳೆ ಕುಟುಂಬವನ್ನು ತಪ್ಪು ಕೆಲಸಗಳಿಂದ ತಡೆಯುತ್ತಾಳೆ. ಕುಟುಂಬದ ಯಾವುದೇ ಓರ್ವ ಸದಸ್ಯ ತಪ್ಪು ಕೆಲಸವನ್ನು ಮಾಡುತ್ತಿದ್ದಾನೆ ಎಂದು ಆಕೆಗೆ ತಿಳಿದರೆ ಖಂಡಿತ ಅದನ್ನು ತಡೆಯುತ್ತಾಳೆ.
ಸಂಪತ್ತು ಬೆಳೆಬೇಕು.. ಕೊಳೆಯಬಾರದು :
ಸಂಪತ್ತನ್ನು ಕೂಡಿಡುವ ಹಾಗೂ ಯಾವ ರೀತಿ ಬಳಸಬೇಕು ಎಂದು ಗೊತ್ತಿರುವ ಮಹಿಳೆಯರು ಅವರ ಕುಟುಂಬವನ್ನು ಎಂದಿಗೂ ಬಿಕ್ಕಟ್ಟಿಗೆ ತಳ್ಳುವುದಿಲ್ಲ. ಧರ್ಮಗ್ರಂಥಗಳ ಪ್ರಕಾರ, ಹಣದ ಸದ್ಬಳಕೆ ಬಗ್ಗೆ ಮಹಿಳೆಗೆ ಗೊತ್ತಿರಬೇಕು. ಇದು ಕಷ್ಟ ಕಾಲದಲ್ಲಿ ಕುಟುಂಬವನ್ನು ರಕ್ಷಿಸುತ್ತದೆ. ಪಾರ್ವತಮ್ಮ ರಾಜಕುಮಾರ್ ಅವರ ಜೀವನ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಬಲ್ಲದು. ಒಳ್ಳೆಯ ಮಹಿಳೆಗೆ ಹಣವನ್ನು ಹೇಗೆ ಚೆನ್ನಾಗಿ ನಿರ್ವಹಿಸಬೇಕೆಂದು ತಿಳಿದಿರುತ್ತದೆ ಅಂತಹವರು ಪ್ರಸ್ತುತ ಮತ್ತು ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ಹಣವನ್ನು ಬಳಸುತ್ತಾರೆ.
ಮಧುರ ಮಾತೇ ಮಾಣಿಕ್ಯ : ಮಾತು ಮುತ್ತು. ಮಾತೇ ಮೃತ್ಯು ಎನ್ನುವುದು ಸುಳ್ಳಲ್ಲ. ಮಾತು ಸಂಬಂಧಗಳನ್ನು ಸೃಷ್ಟಿಸುತ್ತದೆ ಮತ್ತು ನಾಶಪಡಿಸುತ್ತದೆ ಎಂದು ಹೇಳಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಮಧುರವಾದ ಭಾಷೆಯನ್ನು ಮಾತನಾಡುವ ಮಹಿಳೆಯನ್ನು ಆ ಕುಟುಂಬಕ್ಕೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಮೃದುವಾಗಿ ಮಾತನಾಡುವ ಮಹಿಳೆ ಯಾವಾಗಲೂ ಎಲ್ಲರನ್ನೂ ಒಟ್ಟಿಗೆ ಇರುವಂತೆ ಮಾಡುತ್ತಾಳೆ. ಒಟ್ಟಿಗೇ ಇರುವ ಕುಟುಂಬವೇ ಲಕ್ಷ್ಮಿಯ ದೇಗುಲ.



