ಅಘೋರಿಗಳೆಂದರೆ ಹಿಂದೂಗಳಲ್ಲಿ ಅಷ್ಟೇ ಏಕೆ ಎಲ್ಲ ಧರ್ಮದವರಿಗೂ ಒಂದು ರೀತಿಯ ಭಯ ಭಕ್ತಿ. ಅದಕ್ಕೆ ಕಾರಣ ಅವರ ನಿಗೂಢತೆ. ಅವರು ಇತರರಂತೆ ಬದುಕುವುದಿಲ್ಲ ಅವರ ಆಚಾರ ವಿಚಾರ ಎಲ್ಲವೂ ಸಾಮಾನ್ಯರಿಗಿಂತ ಭಿನ್ನ, ಅದರಲ್ಲೂ ಇವರು ನೋಡಲು ತುಂಬಾ ಭಯಂಕರವಾಗಿರುತ್ತಾರೆ. ಅಘೋರಿಗಳ ಕುರಿತು ಹೇಳುವುದಾದರೆ ಅವರು ಶಿವನ ಅಪ್ರತಿಮ ಭಕ್ತರು ಅವರಿಗೆ ಶಿವನೇ ಎಲ್ಲಾ ಅವರು ಹೆಚ್ಚಾಗಿ ಶಿವ ಮತ್ತು ಶಕ್ತಿಯನ್ನು ಆರಾಧನೆ ಮಾಡುತ್ತಾರೆ. ಅವರಲ್ಲಿ ಹಲವಾರು ಪಂಗಡಗಳಿವೆ ಅಷ್ಟಕ್ಕೂ ಇವರು ಸಾಮಾನ್ಯ ಜನರ ನಡುವೆ ಕಾಣಿಸಿಕೊಳ್ಳುವುದಿಲ್ಲ ಇವರು ಏಕಾಂಗಿಯಾಗಿ ಏಕಾಂತವಾಗಿರಲು ಭಯಸುತ್ತಾರೆ ಇವರು ಹೆಚ್ಚಾಗಿ ಶಿವನ ದೇವಾಲಯಗಳ ಬಳಿಯಲ್ಲಿ ಕಾಣಸಿಗುತ್ತಾರೆ. ಕಾಶಿಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರಿಗೆ ಸ್ಮಶಾನವೇ ದೇವಾಲಯ ಇವರು ದೇಹಕ್ಕೆ ಯಾವುದೇ ಮಾನ್ಯತೆ ಕೊಡುವುದಿಲ್ಲ ಇವರ ಪ್ರಕಾರ ದೇಹ ಅನ್ನುವುದು ಅಸ್ತಿತ್ವದ ಒಂದು ಭಾಗ ಆತ್ಮವೇ ಸರ್ವಶ್ರೇಷ್ಟ ಹಾಗಾಗೀ ಆತ್ಮವನ್ನು ಅರಿತವನೇ ಪರಮಾತ್ಮನನ್ನು ಸೇರತ್ತಾನೆ ಎಂಬ ನಂಬಿಕೆ ಇವರಲ್ಲಿದೆ.ಇಂತಹ ಅಘೋರಿಗಳು ಈಗ ಉಡುಪಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಉಡುಪಿಯಲ್ಲಿ ಅಘೋರಿಗಳಿಂದ ಮಹಾಯಾಗ ನಡೆಯುತ್ತಿದೆ. 15 ದಿನಗಳ ಅಂತರದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ಸಂಭವಿಸಿರುವುದರಿಂದ ಅಘೋರಿಗಳು ಯಾಗ ನಡೆಸುತ್ತಿದ್ದಾರೆ. ಈ ರೀತಿ ಗ್ರಹಣವಾದಾಗಲೆಲ್ಲ ಪ್ರಾಕೃತಿಕ ವಿಪ್ಲವಗಳು ಸಂಭವಿಸುವ ಆತಂಕ ಇರುವ ಕಾರಣಕ್ಕೆ ಮಹಾಯಾಗ ಕೈಗೊಳ್ಳಲಾಗಿದೆ.
ಅಘೋರಿಗಳು ಉಡುಪಿಯಲ್ಲಿ ನಡೆಸುತ್ತಿರುವುದು ಮಹಾ ಮೃತ್ಯುಂಜಯ ಯಾಗ. ಅಘೋರಿಗಳು ಒಂದು ಕಡೆ ನಿಲ್ಲುವುದೇ ಅಪರೂಪ. ಅಂತಹುದರಲ್ಲಿ ಸಂಚಾರದಲ್ಲಿದ್ದ ಅಘೋರಿಗಳು ಲೋಕ ಕಲ್ಯಾಣಾರ್ಥ ಈ ಯಾಗ ಕೈಗೊಂಡಿದ್ದಾರೆ. ಸಂಚಾರ ಮಾರ್ಗದಲ್ಲಿ ಇದ್ದಲ್ಲಿಯೇ ಯಾಗ ನಡೆಸುವಂತೆ ಸೂಚನೆ ಬಂದಿದೆಯಂತೆ. ಸೂಚನೆ ಹೇಗೆ.. ಯಾವ ರೀತಿ.. ಯಾರ ಮೂಲಕ ಬರುತ್ತದೆಯೋ ಗೊತ್ತಿಲ್ಲ. ಅಘೋರಿಗಳಲ್ಲಿ ಟೆಲಿಪಥಿ ಕೂಡಾ ಇದೆ ಎಂಬುದು ಒಂದು ನಂಬಿಕೆ. ಅಂದರೆ ವ್ಯಕ್ತಿ ಎಷ್ಟೇ ದೂರದಲ್ಲಿರಲಿ, ಮೊಬೈಲ್, ಇಂಟರ್ನೆಟ್, ಪತ್ರಗಳಂತಹ ಯಾವುದೇ ಸಂಪರ್ಕ ಸಾಧನವಿಲ್ಲದೆ ಮನಸ್ಸುಗಳ ಮೂಲಕವೇ ಸಂಭಾಷಣೆ ನಡೆಸಬಲ್ಲರು ಎಂದು ಪ್ರತೀತಿ.
ಅಂದಹಾಗೆ ಈ ಈ ಮಹಾ ಯಾಗವನ್ನು ಮಲ್ಪೆ ಸಮೀಪದ ತೊಟ್ಟಂ ಕಡಲ ತೀರದಲ್ಲಿ ನಡೆಸಲಾಗುತ್ತಿದೆ. ಯಾಗ ನಡೆಸಲು ಸೂಕ್ತ ಸ್ಥಾನವನ್ನು ಹುಡುಕಿ ಉಡುಪಿ, ಮಂಗಳೂರು ಭಾಗದಲ್ಲಿ ಅಘೋರಿಗಳು ಹಲವು ಕಡೆ ಭೇಟಿ ಕೊಟ್ಟಿದ್ದರು. ಬಳಿಕ ಪಟ್ಟಂಪ ಪರಿಸರದ ಕಡಲ ತೀರದ ಒಂದು ಫಾರ್ಮ್ ಹೌಸ್ ಅನ್ನು ಯಾಗಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಇವರು ಹೆಚ್ಚು ಜನರನ್ನು ಹತ್ತಿರ ಸೇರಿಸುವುದಿಲ್ಲ. ಸ್ಥಳೀಯ ಸೀಮಿತ ವ್ಯಕ್ತಿಗಳ ಸಹಕಾರದೊಂದಿಗೆ ಅತ್ಯಂತ ಗೌಪ್ಯವಾಗಿ ಯಾಗ ನಡೆಸಲಾಗುತ್ತಿದೆ. ಸತತ ಒಂಬತ್ತು ದಿನಗಳ ಕಾಲ ಅಹೋರಾತ್ರಿ ಈ ಯಾಗ ನಡೆಯಲಿದೆ. ಏಕಕಾಲದಲ್ಲಿ ಎರಡು ಗ್ರಹಣಗಳು ಬಂದ ಸಂದರ್ಭದಲ್ಲಿ, ಪ್ರಾಕೃತಿಕ ಅನಾಹುತಗಳು ಸಂಭವಿಸುವ ಅಪಾಯ ಹೆಚ್ಚು ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವೋ ಎಂಬಂತೆ ವಿಶ್ವದ ನಾನಾ ಭಾಗಗಳಲ್ಲಿ ಗ್ರಹಣದ ನಂತರ ಭೂಕಂಪಗಳು ಕೂಡ ಸಂಭವಿಸಿವೆ . ಹೀಗಾಗಿ ದೇಶದ ಅನೇಕ ಭಾಗಗಳಲ್ಲಿ ಅಘೋರಿಗಳು ಯಾಗ ನಿರತರಾಗಿದ್ದಾರಂತೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ನಿಸ್ವಾರ್ಥಭಾವದಿಂದ ನಾಲ್ವರು ಅಘೋರಿಗಳು ಇಲ್ಲಿ ಯಾಗ ಮಾಡುತ್ತಿದ್ದಾರೆ. ಪ್ರಕೃತಿಯಲ್ಲಿ ದೊರಕುವ ಅಮೃತಬಳ್ಳಿ, ಗರಿಕೆ ಮುಂತಾದ ಸಸ್ಯ ಮತ್ತು ಲೀಟರ್ ಗಟ್ಟಲೆ ಶುದ್ಧ ತುಪ್ಪವನ್ನು ಯಾಗಕ್ಕೆ ಬಳಸಲಾಗುತ್ತಿದೆ.
ಚಂದ್ರಗ್ರಹಣ ಮುಗಿಯುತ್ತಿದ್ದಂತೆ ಆರಂಭವಾದ ಈ ಯಾಗ, ನವಂಬರ್ 17ರಂದು ಪೂರ್ಣಗೊಳ್ಳಲಿದೆ.ಹಿಮಾಲಯ ದಿಂದ ದಕ್ಷಿಣ ಭಾರತದ ಕ್ಕೆ ಅಗಮಿಸಿದ ಆಘೋರಿಗಳು ಈ ಯಾಗವನ್ನು ಕೈಗೊಂಡಿದ್ದಾರೆ. ಖಂಡಗ್ರಸ್ತ್ತ ಸೂರ್ಯ ಗ್ರಹಣ, ರಕ್ತಚಂದನ ಚಂದ್ರಗ್ರಹಣದಿಂದ ಲೋಕಕ್ಕೆ ಅತಿವೃಷ್ಟಿ,ಅನಾವೃಷ್ಠಿ ವಿಪತ್ತು ಸಂಭವಿಸದೆ ಲೋಕ ಸುಭಿಕ್ಷೆಯಿಂದ ಕೂಡಿರುವಂತೆ ಪ್ರಾರ್ಥಿಸಿ ಯಾಗ ನಡೆಸುತ್ತಿದ್ದೇವೆ ಎಂದಷ್ಟೇ ಯಾಗ ನಿರತ ಅಘೋರಿಗಳು ತಿಳಿಸಿದ್ದಾರೆ.
ಪ್ರತಿ ಒಂದೂವರೆ ಸಾವಿರ ಮಂದಿ ನಾಗ ಸಾಧುಗಳಿಗೆ ಓರ್ವ ಅಘೋರಿ ಮುಖ್ಯಸ್ಥನಾಗಿರುತ್ತಾರೆ. ಇಂತಹ ನಾಲ್ವರು ಅಗೋರಿಗಳು ಉಡುಪಿಯಲ್ಲಿ ಯಾಗ ನಿರತರಾಗಿದ್ದಾರೆ. ಯಾವುದೇ ಪ್ರಚಾರವಿಲ್ಲದೆ ಅಪೇಕ್ಷೆ ಇಲ್ಲದೆ ನಡೆಸುವ ಯಾಗಗಳು, ಈ ಜಗತ್ತಿನ ನೆಮ್ಮದಿಗೆ ಕಾರಣವಾಗಿದೆ ಎಂದು ಭಕ್ತರು ನಂಬಿದ್ದಾರೆ.



