ಕಾಂತಾರ ಚಿತ್ರ ಯಶಸ್ವಿಯಾದ ಬೆನ್ನಲ್ಲೆ ಕರಾವಳಿಯ ದೈವ, ಭೂತಕೋಲದ ಮಹಾತ್ಮೆಗಳು, ಕಥೆಗಳು ಹೊರಬೀಳುತ್ತಿವೆ. ಅವು ದಂತಕಥೆಗಳೂ ಹೌದು. ನೈಜ ಕಥೆಗಳೂ ಹೌದು. ರಿಷಭ್ ಶೆಟ್ಟಿ ಮತ್ತವರ ತಂಡಕ್ಕೂ ಅಂತಹ ಹಲವು ಅನುಭಗಳಾಗಿದ್ದವಂತೆ. ಚಿತ್ರ ಪ್ರಚಾರದ ಗಿಮಿಕ್ ಎನ್ನುತ್ತಾರೆ ಎಂಬ ಕಾರಣಕ್ಕೆ ಅವುಗಳನ್ನು ಹೇಳಿಲ್ಲ. ಹೇಳುವುದಿಲ್ಲ ಎಂದು ಕಾಂತಾರ ಬಿಡುಗಡೆಗೂ ಮುಂಚೆಯೇ ಹೇಳಿದ್ದರು. ರಿಷಬ್ ಶೆಟ್ಟಿ ಇವತ್ತಿನವರೆಗೂ ಹೇಳಿಲ್ಲ. ಹಾಗೆಂದು ರಿಯಲ್ಲಾಗಿ ದೈವದ ಪವಾಡ ನಡೆಯುವುದು ನಿಂತೂ ಇಲ್ಲ. ಇದು ಉಕ್ರೇನ್ ವರೆಗೂ ತಲುಪಿರುವ ಕೊರಗಜ್ಜನ ಪವಾಡದ ಕಥೆ.
ತುಳುನಾಡಿನ ದೈವಗಳ ಮಹತ್ವ ಜಗತ್ತಿನೆಲ್ಲೆಡೆ ಹರಡುತ್ತಿರುವ ಸಮಯದಲ್ಲೇ ಉಕ್ರೇನ್ ನ ಕುಟುಂಬವೊಂದು ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಗೇಲು ಸೇವೆ ಭಕ್ತಿಭಾವ ಮೆರೆದಿದೆ. ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ಉಕ್ರೇನ್‍ನ ಆಂಡ್ರೂ ಹಾಗೂ ಎಲೆನಾ ದಂಪತಿ ಕೊರಗಜ್ಜನಿಗೆ ಅಗೇಲು ಸೇವೆ ಅರ್ಪಿಸಿದ್ದಾರೆ. ಇವರ ಮಗನಿಗೆ ಅನಾರೋಗ್ಯವಿತ್ತಂತೆ. ಹಲವು ಕಡೆ ಚಿಕಿತ್ಸೆ ಕೊಡಿಸಿದ್ದರೂ ಸರಿ ಹೋಗಿರಲಿಲ್ಲವಂತೆ. ಆದರೆ ಕೊರಗಜ್ಜನಿಗೆ ಹರಕೆ ಹೊತ್ತುಕೊಂಡ ನಂತರ ಪವಾಡವಾಗಿ ಮಗ ಹುಷಾರಾದನಂತೆ.
ಇಂಡಿಯಾಗೆ ಬಂದಿದ್ದ ಆಂಡ್ರೂ ಹಾಗೂ ಎಲೆನಾ ದಂಪತಿ ಕಳೆದ 3 ತಿಂಗಳಿಂದ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕೊಡ್ಮಾಣ್ ಹತ್ತಿರದ ಗೋವಿನ ತೋಟದ ಶ್ರೀ ರಾಧಾ ಸುರಭೀ ಗೋಮಂದಿರದಲ್ಲಿದ್ದರು. ಇವರ 6 ವರ್ಷದ ಮಗ ಮ್ಯಾಕ್ಸಿಂಗೆ ಹೈ ಶುಗರ್. ಚಿಕ್ಕ ಮಕ್ಕಳಿಗೆ ಶುಗರ್ ಬಂದರೆ ಕಂಟ್ರೋಲ್ ಮಾಡಬಹುದು. ಆದರೆ ಆಗಿರಲಿಲ್ಲ. ಮಗನ ಅನಾರೋಗ್ಯದ ಹಿನ್ನೆಲೆ 3 ತಿಂಗಳ ಹಿಂದೆ ಉಕ್ರೇನ್ ನಿಂದ ಭಾರತ ಪ್ರವಾಸ ಕೈಗೊಂಡ ಕುಟುಂಬವು ನಾಡಿ ನೋಡಿ ಔಷಧಿ ಕೊಡುವ ಮಂಗಳೂರಿನ ಭಕ್ತಿ ಭೂಷಣ್ ದಾಸ್ ಅವರನ್ನು ಭೇಟಿ ಮಾಡಿತ್ತು. ಮಂಗಳೂರು ಹೊರವಲಯದ ಬಂಟ್ವಾಳದ ಪುದು ಗ್ರಾಮದ ಬ್ರಹ್ಮಗಿರಿ ಗೋವಿನತೋಟ ಎಂಬಲ್ಲಿರುವ ಶ್ರೀ ರಾಧಾ ಸುರಭಿ ಗೋಶಾಲೆಯಲ್ಲಿ ಮ್ಯಾಕ್ಸಿಂಗೆ ಚಿಕಿತ್ಸೆ ನೀಡಲಾಗುತ್ತಿತ್ತು. ದೇಸಿ ದನದ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ನೀಡಿದ್ದರು. ಈ ವೇಳೆ ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಮಗನ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ದಂಪತಿ ಪ್ರಾರ್ಥಿಸಿದ್ದರು. ಜೊತೆಗೆ ಸಮಸ್ಯೆಗೆ ಪರಿಹಾರ ದೊರೆತರೆ ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ರು. ಹರಕೆ ಹೊತ್ತುಕೊಂಡ ಕೆಲವೇ ದಿನಗಳಲ್ಲಿ ಶುಗರ್ ನಿಯಂತ್ರಣಕ್ಕೆ ಬಂದಿದೆ.
ಮಗ ಮ್ಯಾಕ್ಸಿಂ ಗುಣಮುಖನಾಗಿರುವ ಹಿನ್ನೆಲೆಯಲ್ಲಿ ಕುಟುಂಬ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ. ಕೊರಗಜ್ಜನ ಪವಾಡ ದೇಶ ದೇಶಗಳಿಗೂ ಹಬ್ಬುತ್ತಿರುವುದು ನೋಡಿ ಭಕ್ತರು ಭಕ್ತಿಪರವಶರಾಗಿದ್ದಾರೆ.



