ಅಕ್ಕಪಕ್ಕದವರಲ್ಲಿ ಏನನ್ನೂ ಪಡೆಯದೆ ಸಾಲ ಪಡೆಯದೆ ಎರವಲು ಪಡೆಯದೆ ಜೀವಿಸುವುದು ಸುಲಭವಲ್ಲ. ನೆರೆಹೊರೆ ಇರೋದೇ ನಮ್ಮ ಕಷ್ಟಕ್ಕೆ ಆಗೋಕೆ. ಆದರೆ ಕೆಲವು ವಸ್ತುಗಳಿರುತ್ತವೆ. ಅವುಗಳನ್ನು ಮಾತ್ರ ಅಪ್ಪಿತಪ್ಪಿಯೂ ಕಡ ಅಥವಾ ಎರವಲು ತರಬಾರದು. ಇಂತಹ ವಸ್ತುಗಳನ್ನು ಎರವಲು ಪಡೆದುಕೊಂಡರೆ ದರಿದ್ರ ಲಕ್ಷ್ಮಿ ಬೆನ್ನು ಹತ್ತುತ್ತಾಳೆ ಅನ್ನೋ ನಂಬಿಕೆ ಇದೆ. ಅಷ್ಟೇ ಅಲ್ಲ, ಅವುಗಳನ್ನು ಉಚಿತವಾಗಿಯೂ ಕೊಡಬೇಡಿ.
ಅವರು ಸ್ನೇಹಿತರೇ ಆಗಿರಲಿ, ನೆಂಟರೇ ಆಗಿರಲಿ, ಬಂಧುವೇ ಆಗಿರಲಿ.. ಬೇರಾವುದನ್ನಾದರೂ ಸಾಲ ಪಡೆಯಿರಿ. ಅಥವಾ ಕೊಡಿ. ಹಣ, ಬಟ್ಟೆ, ಪುಸ್ತಕ ಇವೆಲ್ಲ ಇರೋದು ನಮಗಷ್ಟೇ ಅಲ್ಲ, ನಮ್ಮವರ ಅನೂಕೂಲಕ್ಕೇ ಎನ್ನುವುದು ನಿಜ. ಆದರೆ ಕೆಲವುಗಳನ್ನು ಮಾತ್ರ ಕಡ ಪಡೆಯಲೂ ಬಾರದು. ಕಡ ಕೊಡಲೂ ಬಾರದು.
ಯಾವ ವಸ್ತುವನ್ನು ತೆಗೆದುಕೊಳ್ಳಬೇಕು ಮತ್ತು ತೆಗೆದುಕೊಳ್ಳಬಾರದು, ಯಾವುದನ್ನು ಕೊಡಬಾರದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇಂಥ ದೈನಂದಿನ ವಹಿವಾಟಿನಿಂದಲೇ ನಮ್ಮ ಹಣೆಬರಹ ಬದಲಾಗುತ್ತದೆ. ಕೆಲವನ್ನು ಕೊಟ್ಟರೆ ನಷ್ಟ, ಕೆಲವನ್ನು ಪಡೆಯುವುದು ದುರದೃಷ್ಟ. ಇಂತಹ ಕೆಲವು ವಿಷಯಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಉಪ್ಪು : ಉಪ್ಪು ಇಲ್ಲದೆ ಊಟವಿಲ್ಲ. ಉಪ್ಪಿಗಿಂತ ರುಚಿ ಬೇರೆ ಇಲ್ಲ. ಪ್ರತಿ ಮನೆಯಲ್ಲೂ ಆಹಾರ ಪದಾರ್ಥಗಳ ವಹಿವಾಟು ಸಾಮಾನ್ಯವಾಗಿದೆ. ಆದರೆಸ ಶಾಸ್ತ್ರಗಳ ಪ್ರಕಾರ, ಉಪ್ಪನ್ನು ಯಾರಿಗೂ ಸಾಲವಾಗಿ ನೀಡಬಾರದು, ದಾನವಾಗಿ ಪಡೆಯಬಾರದು. ಉಪ್ಪು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ. ಉಪ್ಪನ್ನು ಎರವಲು ಪಡೆದರೆ ಈ ಎರಡು ಗ್ರಹಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ನಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟು ಪ್ರಾರಂಭವಾಗುತ್ತದೆ. ಹಾಗಾಗಿ ಅಪ್ಪಿತಪ್ಪಿಯೂ ಯಾರಿಗೂ ಉಪ್ಪನ್ನು ಕೊಡಬೇಡಿ ಅಥವಾ ಯಾರಿಂದಲೂ ಉಪ್ಪನ್ನು ತೆಗೆದುಕೊಳ್ಳಬೇಡಿ. ಆದರೆ ದಾನ ನೀಡುವ ಸಂದರ್ಭದಲ್ಲಿ ಪಂಡಿತೋತ್ತಮರಿಗೆ ಇದು ಅನ್ವಯವಾಗುವುದಿಲ್ಲ.
ಪೊರಕೆ : ಪೊರಕೆಯನ್ನು ಲಕ್ಷ್ಮಿಯ ಸಂಕೇತವೆಂದು ನಂಬುತ್ತಾರೆ. ಪೊರಕೆಯನ್ನು ಮನೆಯ ಯಾವ ಮೂಲೆಯಲ್ಲಿಡಬೇಕು ಎನ್ನುವುದಕ್ಕೇ ನಿಯಮಗಳಿವೆ. ಶಾಸ್ತ್ರಗಳಲ್ಲಿ, ಪೊರಕೆ ಕೊಟ್ಟರೆ ಲಕ್ಷ್ಮೀ ಮನೆಯಿಂದ ಹೊರಡುತ್ತಾಳೆ ಎಂಬ ನಂಬಿಕೆ ಇದೆ. ಆಗ ವ್ಯಕ್ತಿಯ ಆರ್ಥಿಕ ಶಕ್ತಿ ದುರ್ಬಲಗೊಂಡು ನಷ್ಟ ಶುರುವಾಗುತ್ತದೆ. ಹಣ ನೀರಿನಂತೆ ಖರ್ಚಾಗಿ ಹೋಗುತ್ತೆ. ಹಾಗಾಗಿ ಪೊರಕೆಯನ್ನು ದಾನವಾಗಿ ಕೊಡಬೇಡಿ. ದಾನವಾಗಿ ಪಡೆಯಲೂ ಬಾರದು.
ಲೇಖನಿ : ಪೆನ್ನು ವಿದ್ಯಾರ್ಥಿಗಳಿಗಂತೂ ಬೇಕೇ ಬೇಕು. ಆದರೆ ಕಾಲೇಜ್ ಲೈಫ್ ಇರಲಿ, ಸ್ಕೂಲ್ ಡೇ ಇರಲಿ, ಸ್ನೇಹಿತರಿಂದ ಪೆನ್ನು ತೆಗೆದುಕೊಳ್ಳೋದು ಸಾಮಾನ್ಯ. ಬೇರೆ ಕಡೆಗಳಲ್ಲಿದ್ದಾಗಲೂ ಬೇಕಾದಾಗ ಅಪರಿಚಿತ ವ್ಯಕ್ತಿಗಳಿಂದ ಪೆನ್ನು ಕೇಳುತ್ತೇವೆ. ಧರ್ಮಗ್ರಂಥಗಳ ಪ್ರಕಾರ, ಪೆನ್ನು ಅಥವಾ ಲೇಖನಿ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕವನ್ನು ಇಡುತ್ತದೆ. ನೀವು ಯಾರೊಬ್ಬರಿಂದ ಪೆನ್ನು ತೆಗೆದುಕೊಂಡರೆ, ಬರೆದು ಅದನ್ನು ಹಿಂತಿರುಗಿಸಿ. ಆ ವ್ಯಕ್ತಿಯ ಪೆನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ. ಅಲ್ಲದೆ, ನಿಮ್ಮ ಪೆನ್ನು ತೆಗೆದುಕೊಂಡವರಿಂದ ನಿಮ್ಮ ಪೆನ್ನು ಹಿಂಪಡೆಯಿರಿ. ನೀವು ಇತರರಿಂದ ನಿಮ್ಮ ಪೆನ್ನು ತೆಗೆದುಕೊಳ್ಳದಿದ್ದರೆ, ನಿಮ್ಮ ಅದೃಷ್ಟವನ್ನು ಲೇಖನಿಯೊಂದಿಗೆ ಇತರರೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತದೆ. ಅವರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಫಲ ನಿಮಗೂ ವರ್ಗವಾಗುತ್ತದೆ.
ವಾಚ್ : ಗಡಿಯಾರವು ಅಷ್ಟೆ. ಗಡಿಯಾರ ಎಂದರೆ ಕಾಲ. ನಮಗೆ ಒಳ್ಳೆಯ ಮತ್ತು ಕೆಟ್ಟ ಸಮಯವನ್ನು ಹೇಳುವ ಒಂದು ಯಂತ್ರ. ಬೇರೆಯವರ ಕೈ ಗಡಿಯಾರವನ್ನು ಎಂದಿಗೂ ಧರಿಸಬೇಡಿ. ಏಕೆಂದರೆ ಇದರಿಂದ ಇತರರ ಕೆಟ್ಟ ಸಮಯಗಳು ನಿಮಗೆ ಸಂಭವಿಸುತ್ತವೆ. ಗಡಿಯಾರವು ವ್ಯಕ್ತಿಯ ಭವಿಷ್ಯವನ್ನು ಸಮಯದೊಂದಿಗೆ ನಿರ್ಧರಿಸುತ್ತದೆ, ಆದ್ದರಿಂದ ಗಡಿಯಾರದ ವಹಿವಾಟನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.
ಚಪ್ಪಲಿ : ಚಪ್ಪಲಿಯೂ ಅಷ್ಟೆ. ಚಪ್ಪಲಿಯೊಂದಿಗೆ ವ್ಯಕ್ತಿಯೊಬ್ಬನ ಶುಭಾಶುಭಗಳೂ ಸಂಚಾರ ಮಾಡುತ್ತವೆ. ಆಯುಷ್ಯವೂ ಕೂಡಾ. ಹಳ್ಳಿಗಳಲ್ಲಿ ದೊಡ್ಡವರು ತಮ್ಮ ಚಪ್ಪಲಿಗಳನ್ನು ಕಿರಿಯರಿಗೆ ತಮಾಷೆಗೂ ಧರಿಸಲು ಬಿಡುವುದಿಲ್ಲ. ಲೋಕಜ್ಞಾನವಿಲ್ಲದ ಮಕ್ಕಳಿಗೆ ಧರ್ಮಗ್ರಂಥದ ಈ ಸೂತ್ರ ತಟ್ಟುವುದಿಲ್ಲವಾದರೂ ಬೇರೆಯವರಿಗೆ ತಪ್ಪಿದ್ದಲ್ಲ. ಬೇರೆಯವರ ಚಪ್ಪಲಿ ಧರಿಸಿದರೆ ನೀವು ಯಾರ ಚಪ್ಪಲಿ ಧರಿಸಿದ್ದೀರೋ ಅವರ ಪಾಪಪುಣ್ಯ ಮತ್ತು ಆಯಷ್ಯ ಎಲ್ಲವೂ ನಿಮಗೆ ವರ್ಗವಾಗುತ್ತದೆ ಎನ್ನುವ ಅಪಾಯವಿದೆ.



