ಒಂದು ವರ್ಷದ ಹಿಂದೆ ಮುಡಿಸಿದ್ದ ಹೂ ಬಾಡಿರುವುದಿಲ್ಲ. ವರ್ಷದ ಹಿಂದೆ ಹಚ್ಚಿದ್ದ ದೀಪ ಆರಿರುವುದಿಲ್ಲ. ವರ್ಷದ ಹಿಂದೆ ಇಟ್ಟಿದ್ದ ನೈವೇದ್ಯದ ಅನ್ನ ಹಳಸಿರುವುದಿಲ್ಲ. ಇದು ಹಾಸನಾಂಬೆಯ ಕಥೆ. ಮಹತ್ವ. ಸಪ್ತಮಾತೃಕೆ ಎಂದು ಕರೆಯಲ್ಪಡುವ ಹಾಸನಾಂಬೆಯ ದೇವಾಲಯವಿದು. ವರ್ಷಕ್ಕೊಮ್ಮೆಯಷ್ಟೇ ಬಾಗಿಲು ತೆಗೆಯುವ ಈ ದೇಗುಲದಿಂದಲೇ ಹಾಸನ ಎಂಬ ಹೆಸರು ಬಂತು. ಮೂಲ ಊರು ಸಿಂಹಾಸನ ಪುರ. ಈಗ ಹಾಸನವಾಗಿ ಬದಲಾಗಿದೆ.
ಪುರಾಣ ಮತ್ತು ಇತಿಹಾಸ
ಪುರಾಣಕ್ಕೆ ಹೋದರೆ ಮಹಾಭಾರತದ ಕಥೆಯೂ ಇದೆ. ಅರ್ಜುನನ ಮೊಮ್ಮಗ ಪರೀಕ್ಷಿತನ ಮಗ ಜನಮೇಜಯ ಶಾಪಗ್ರಸ್ಥನಾಗಿದ್ದ ಕಾಲದಲ್ಲಿ ಇಲ್ಲಿ ನೆಲೆಸಿದ್ದನಂತೆ. ದೇವಾಲಯದ ಪ್ರವೇಶ ಮಾಡಿದರೆ ಕೂಡಲೇ ಸಿದ್ದೇಶ್ವರಸ್ವಾಮಿ ದೇವಾಲಯ ಇದ್ದು. ಈಶ್ವರ ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿದೆ. ದೇವಾಲಯದ ಆವರಣದಲ್ಲಿ 101 ಲಿಂಗವನ್ನು ಒಂದೇ ಸಲ ನೋಡುವ ಅವಕಾಶ ದೊರೆಯುತ್ತದೆ. ಈ ಗುಡಿಯ ಮೇಲ್ಭಾಗದಲ್ಲಿ 4 ಅಡಿ ಎತ್ತರದ ಇನ್ನೊಂದು ಮಹಾಲಿಂಗವಿದೆ. ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮೀದೇವಿ, ವರಾಹಿ ಮತ್ತು ಚಾಮುಂಡಿ ವಾರಣಾಸಿಯಿಂದ ದಕ್ಷಿಣಕ್ಕೆ ವಿಹಾರಕ್ಕೆ ಬಂದಾಗ ಸಿಂಹಾಸನಪುರಿಯ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆಸಲು ನಿರ್ಧರಿಸಿದರಂತೆ. ವೈಷ್ಣವಿ, ಕುಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗು ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಚಾಮುಂಡಿ, ವರಾಹಿ, ಇಂದ್ರಾಣಿ ನಗರ ಮಧ್ಯ ಭಾಗದ ದೇವಿಗೆರೆಯ ಬಳಿ ನೆಲೆಸಿದರು ಎನ್ನುವುದು ಪ್ರತೀತಿ. ಸುಮಾರು 12ನೇ ಶತಮಾನದಲ್ಲಿ ಚನ್ನಪಟ್ಟಣ ಪಾಳೆಗಾರನಾದ ಶ್ರೀ ಕೃಷ್ಣ ನಾಯ್ಕರಿಗೆ ಕನಸಿನಲ್ಲಿ ಹಾಸನಾಂಬ ದೇವಿಯು ನಾನು ಇಂತಹ ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿಯನ್ನು ಕಟ್ಟಿಸು ಎಂದು ಹೇಳಿ ಮಾಯವಾದಳು. ನಂತರ ಪಾಳೆಗಾರನಾದ ಕೃಷ್ಣಪ್ಪ ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು
ಹೂವು.. ದೀಪ..ನೈವೇದ್ಯ ರಹಸ್ಯ
ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪವು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಗರ್ಭಗುಡಿಯಲ್ಲಿ ಉರಿಯುವುದು. ಹಾಗೆ ದೇವಿಗೆ ಮುಡಿಸಿದ ಹೂ ಬಾಡಿರುವುದಿಲ್ಲ. ಇಟ್ಟ ಅನ್ನ ಹಳಸಿರುವುದಿಲ್ಲ. ಇದು ಹಾಸನಾಂಬೆ ದೇವಿಯ ವಿಶೇಷ ಮಹಿಮೆ. ಮತ್ತೊಂದು ಸಂಗತಿ ಎಂದರೆ ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ದೇವಿಯ ದರ್ಶನ ಮಾಡಲು ಭಕ್ತರಿಗೆ ಅವಕಾಶ ಇರುವುದಿಲ್ಲ. ಹಾಗೊಂದು ವೇಳೆ ಬಾಗಿಲು ತೆರೆದ ಕೂಡಲೇ ದೇವಿಯ ದರ್ಶನ ಮಾಡಿದರೆ ಅದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಜನರ ನಂಬಿಕೆ. ಆ ಕಾರಣಕ್ಕೆ ದೃಷ್ಟಿ ನಿವಾರಣೆಗೆ ಬಾಳೆ ಮರವನ್ನು ಕಡಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡುವ ಸಂಪ್ರದಾಯ ರೂಢಿಯಲ್ಲಿದೆ.
ಗುರುವಾರದಿಂದಲೇ ದರ್ಶನ ಆರಂಭ
ಆಶ್ವಯುಜ ಮಾಸದ ಹುಣ್ಣಿಮೆ ಕಳೆದ ನಂತರ ಬರುವಂತಹ ಗುರುವಾರವೇ ಈ ದೇಗುಲದ ಬಾಗಿಲು ತೆಗೆಯುತ್ತೆ. ಬಲಿಪಾಡ್ಯಮಿ ದಿನ ಬೆಳಗ್ಗೆ ದೇವಸ್ಥಾನದ ಬಾಗಿಲನ್ನು ಮುಚ್ಚುತ್ತೆ. ಇದು 12ನೇ ಶತಮಾನದ ದೇವಾಲಯ. ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಆ ಕುಂಭಗಳನ್ನು ಮುಖವಾಡಗಳಿಂದ ಅಲಂಕರಿಸಲಾಗಿದೆ.
ಇಲ್ಲಿ ಕಳ್ಳರೂ ದೇವರೇ..!
ಹಾಸನಾಂಬೆ ದೇವಾಲಯದ ಬಗ್ಗೆ ಮತ್ತೊಂದು ಸ್ವಾರಸ್ಯಕರವಾದ ಸಂಗತಿ ಇದೆ. ಒಮ್ಮೆ ದೇವಿಯ ಆಭರಣಗಳನ್ನು ಅಪಹರಿಸುವ ಉದ್ದೇಶದಿಂದ ನಾಲ್ವರು ಕಳ್ಳರು ಆಭರಣಗಳನ್ನು ಕದಿಯಲು ಯತ್ನಿಸಿದರಂತೆ. ಕುಪಿತಳಾದ ದೇವಿ, ಕಳ್ಳರಿಗೆ ಕಲ್ಲಾಗಿ ಹೋಗಿ ಎಂದು ಶಾಪ ಕೊಟ್ಟಳು. ಪರಿಣಾಮವಾಗಿ ಆ ಕಳ್ಳರೆಲ್ಲ ಕಲ್ಲಾದರು. ಹೀಗೆ ಕಳ್ಳತನ ಮಾಡಲು ಬಂದು ಕಲ್ಲಾದವರಿಗೂ ಗುಡಿ ನಿರ್ಮಿಸಲಾಗಿದ್ದು, ಕಳ್ಳಪ್ಪನ ಗುಡಿ ಎಂದೇ ಪ್ರಸಿದ್ಧಿ ಪಡೆದಿದೆ.
ಪ್ರವೇಶ ಪದ್ಧತಿ ಸಂಪ್ರದಾಯ
ಬಾಗಿಲು ತೆರೆಯುವುದಕ್ಕೂ ಮೊದಲು ಸಾಂಪ್ರದಾಯಿಕ ವಿಧಿ ವಿಧಾನ ಹಾಗೂ ಅರಸು ವಂಶಸ್ಥರು ಬನ್ನಿ ಕಡಿಯುತ್ತಾರೆ. ನಂತರ ಬಾಗಿಲು ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ಮುಂಭಾಗ ಕಳೆದ ವರ್ಷ ಹಚ್ಚಿದ್ದ ದೀಪ ಹಾಗೆಯೇ ಪ್ರಜ್ವಲಿಸುತ್ತಲೇ ಇರುತ್ತದೆ. ಹೂ ಮತ್ತು ಎಡೆಯು ಬಾಡದಿರುವುದು ಭಕ್ತರಲ್ಲಿ ಅಪಾರ ನಂಬಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಹಚ್ಚಿದಂತಹ ದೀಪ ಆರಿ ಹೋದರೆ, ಹೂ ಬಾಡಿದರೆ ಮತ್ತು ಎಡೆಯಲ್ಲಿ ಸ್ವಲ್ಪ ಏರುಪೇರಾದರೂ ಏನಾದರೂ ತೊಂದರೆಯಾಗಲಿದೆ ಎಂಬ ನಂಬಿಕೆ ಭಕ್ತರದ್ದು. ದೇಗುಲ ಬಾಗಿಲು ತೆರೆದಾಗ ದೇವಿ ಕಣ್ಣುಬಿಟ್ಟ ರೀತಿಯಲ್ಲೇ ಗೋಚರಿಸುವುದರಿಂದ ಯಾರೂ ಒಗ್ಗರಣೆ ಹಾಕಲ್ಲ. ಸಾಂಬಾರು ಪದಾರ್ಥ ಕರಿಯುವುದಿಲ್ಲ. ಈ ಊರಿನವರಾರೂ ದೇವಿಯ ಫೋಟೋ ಇಟ್ಟುಕೊಳ್ಳಲ್ಲ. ಮಡಿಮೈಲಿಗೆ ಭಯ ಕಾರಣ.
ದೀಪ ಆರಿದ ವರ್ಷ ನಡೆದಿದ್ದವು ದುರಂತ..!
ಹಿರಿಯರು ಹೇಳುವ ಪ್ರಕಾರ ಎರಡು ಬಾರಿ ದೀಪ ಆರಿತ್ತಂತೆ. ಒಮ್ಮೆ ಇಂದಿರಾ ಗಾಂಧಿ ಹತ್ಯೆಯಾಗಿತ್ತು. ಮತ್ತೊಮ್ಮೆ ರಾಜೀವ್ ಗಾಂಧಿ ಹತ್ಯೆಯಾಗಿತ್ತು. ಅದನ್ನು ನೆನಪಿಸಿಕೊಳ್ಳುವವರಿದ್ದಾರಾದರೂ ಇದಕ್ಕೆ ಪೂರಕ ಸಾಕ್ಷಿಗಳು ಸಿಕ್ಕುವುದಿಲ್ಲ.



