ಹಸಿದ ಒಡಲಿಗೆ ಅನ್ನ ನೀಡೋ ಅನ್ನಪೂರ್ಣೇಶ್ವರಿ ಪುಣ್ಯ ಭೂಮಿ ಆಧಿಶಕ್ತಿ ಅನ್ನಪೂರ್ಣೇಶ್ವರಿ ನೆಲೆಸಿರೋ ದಿವ್ಯತಾಣ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಕ್ಷೇತ್ರ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಬರೋ ಭಕ್ತರು ಈ ತಾಯಿಯ ದರ್ಶನದಿಂದ ಪುನೀತರಾಗ್ತಿದ್ದಾರೆ.
ನವರಾತ್ರಿ ಉತ್ಸವದಲ್ಲಿ ಶ್ರೀ ಕ್ಷೇತ್ರದಲ್ಲಿನ ದ್ವಾದಶ ಪೂಜೆ ನಡೆಯುತ್ತದೆ. 12 ದಿನ ನಡೆಯುವ ಪೂಜೆ ಸಂಪನ್ನವಾಗುವುದು ದ್ವಾದಶರಾತ್ರಿಯಂದು. ಪೂಜೆ ಅತ್ಯಂತ ಶ್ರೇಷ್ಟ ಎನ್ನುವುದು ನಂಬಿಕೆ. ಅನ್ನಪೂಣೇಶ್ವರಿ ಸನ್ನಿಧಾನದಲ್ಲಿ ನವರಾತ್ರಿಯಲ್ಲಿ ನಡೆದ ಚಂಡಿಕಾ ಹವನದಲ್ಲಿ ಅರ್ಚಕರು ದೇವಿಗೆ ಅಗ್ನಿಗೆ ಬೇರೆ ಬೇರೆ ತರದ ಹವಿಸ್ಸುಗಳನ್ನು ನೀಡಲಾಗುತ್ತದೆ. ನವರಾತ್ರಿಯ ಒಂಭತ್ತೂ ದಿನವೂ ಕೂಡಾ ವಿಶೇಷ ಪೂಜೆ ಪುನಸ್ಕಾರಗಳನ್ನ ದೇವಿಗೆ ಅರ್ಪಿಸಲಾಗುತ್ತದೆ. ಮಹಿಳೆಯರು ಅಕ್ಕಿ, ಹಣ್ಣು ಕಾಯಿ ಕುಂಕುಮ ಕೊಬ್ಬರಿ ಬೆಲ್ಲ ಇಂತಹ ಮಂಗಳಕರ ವಸ್ತುಗಳನ್ನು ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ದೇವಿಗೆ ಬೆಲ್ಲದ ದೀಪ ಕೂಡಾ ಹಚ್ಚುತ್ತಾರೆ. ನವರಾತ್ರಿ ಉತ್ಸವದ ಅಂಗವಾಗಿ ಮಹಾಚಂಡಿಕಾ ಹೋಮ ನಿನ್ನೆ ಬೆಳಿಗ್ಗೆ 9.30ಕ್ಕೆ ಆರಂಭಗೊಂಡ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಪ್ತಶತಿ ಪಾರಾಯಣ,ವೇದ ಪಾರಾಯಣ,ಸುಂದರಕಾಂಡ ಪಾರಾಯಣ,ಕುಂಕುಮಾರ್ಚನೆ ಮತ್ತು ಪರಿವಾರ ದೇವರುಗಳಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಿತು.





