ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿಗೆ ಧರ್ಮ ದಂಗಲ್ನ ಕರಿನೆರಳು ಬಿದ್ದಿದೆ. ಇತ್ತೀಚೆಗೆ ನಡೆದ ಕುಕ್ಕರ್ ಬಾಂಬ್ ಸ್ಫೋಟ ಹಿನ್ನೆಲೆ ವ್ಯಾಪಾರಿ ಧರ್ಮ ದಂಗಲ್ ತಾರಕಕ್ಕೇರಿತ್ತು. ಇದರ ಪರಿಣಾಮ ಈ ಬಾರಿ ಚಂಪಾಷಷ್ಠಿಗೆ ಮುಸ್ಲಿಂ ವ್ಯಾಪಾರಿಗಳು ಬರಬಾರದು ಅಂತಾ ಹಿಂದೂ ಸಂಘಟನೆಗಳು ತಾಕೀತು ಮಾಡಿದ್ದವು. ಹಿಂದೂ ಸಂಘಟನೆಗಳ ತಾಕೀತಿಗೆ ಶರಣಾದ ಮುಸ್ಲಿಮರೂ ಜಾತ್ರೆಯಿಂದ ದೂರವೇ ಉಳಿದರು. ಹೀಗಾಗಿ ಚಂಪಾಷಷ್ಠಿ ಧರ್ಮ ದಂಗಲ್ನ ಆತಂಕವಿಲ್ಲದೇ ನಿರಾಳವಾಗಿ ನಡೆದಿದೆ.ಮುಸ್ಲಿಮರು ಜಾತ್ರೆಯ ವ್ಯಾಪಾರಕ್ಕೆ ಬಾರದೆ ಧರ್ಮ ದಂಗಲ್ನ ಆತಂಕದಲ್ಲಿದ್ದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಘರ್ಷವಿಲ್ಲದೇ ಜಾತ್ರೆ ಸಂಪನ್ನಗೊಂಡಿದೆ.
ಕಳೆದ ವರ್ಷ ಕರಾವಳಿಯಲ್ಲಿ ಆರಂಭವಾಗಿದ್ದ ಧರ್ಮದಂಗಲ್ ಈ ಬಾರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಟ್ಟಿತ್ತು. ಚಂಪಾಷಷ್ಠಿಯ ಜಾತ್ರಾ ಸಂಧರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡಬಾರದು ಅಂತಾ ಹಿಂದೂ ಸಂಘಟನೆಗಳು ಬ್ಯಾನರ್ ಅಳವಡಿಸಿದ್ದವು. ಅದಕ್ಕೆ ತಕ್ಕಂತೆ ದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣ ಹಾಗೂ ಮಂಗಳೂರು ಕುಕ್ಕರ ಬಾಂಬ್ ಸ್ಫೋಟವೂ ಜೊತೆಗೂಡಿದವು. ಶಾರೀಕ್ ಮತ್ತು ಕುಕ್ಕರ್ ಬಾಂಬ್ ಸ್ಫೋಟದ ತನಿಖೆಯಲ್ಲಿ ಯಾವಾಗ ಧರ್ಮಸ್ಥಳ, ಕದ್ರಿಯಂತಹ ಪವಿತ್ರ ಕ್ಷೇತ್ರಗಳಲ್ಲಿ ಸ್ಫೋಟಕ್ಕೆ ಸಂಚು ಹೂಡಿದ್ದರು ಎಂಬ ಸುದ್ದಿ ಬಹಿರಂಗವಾಯ್ತೋ.. ಹಿಂದೂ ಸಂಘಟನೆಗಳ ಆಕ್ರೋಶವೂ ಜೋರಾಯ್ತು. ಪೊಲೀಸರಿಗೂ ದೂರು ಕೊಟ್ಟವು.
ಲಕ್ಷಾಂತರ ಭಕ್ತರು ಆಗಮಿಸುವ ಜಾತ್ರೆಯಲ್ಲಿ ಹೋರಾಟಕ್ಕೆ ಇದು ಸಮಯವಲ್ಲ ಎಂದುಕೊಂಡೋ ಏನೋ.. ಮುಸ್ಲಿಂ ಸಂಘಟನೆಗಳಾಗಲೀ, ಮುಸ್ಲಿಂ ವ್ಯಾಪಾರಿಗಳಾಗಲೀ.. ಪ್ರತಿಭಟಿಸುವ ಗೋಜಿಗೆ ಹೋಗದೆ ವ್ಯಾಪಾರದಿಂದ ದೂರವುಳಿದರು. ಜೊತೆಗೆ ಹೆಜ್ಜೆ ಹೆಜ್ಜೆಗೂ ಹಿಂದೂ ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳು ಬರದಂತೆ ಎಚ್ಚರಿಕೆ ವಹಿಸಿದ್ದವು. ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಲವು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಕಾವಲಿಗೆ ನಿಂತಿದ್ದರು. ಹೀಗಾಗಿ ಯಾವುದೇ ಘರ್ಷಣೆ, ಗದ್ದಲಗಳಿಲ್ಲದೆ ಚಂಪಾಷಷ್ಟಿ ಸಂಪನ್ನವಾಗಿದೆ.
ಈ ಬಾರಿ ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಕೂಡಾ ಕ್ಷೇತ್ರದಿಂದ ಮುಸ್ಲಿಮರನ್ನು ದೂರ ಇಡುತ್ತೇವೆ. ಕುಕ್ಕೆಯಲ್ಲಿ ಮಾತ್ರವೇ ಅಲ್ಲ, ಹಿಂದೂಗಳ ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮರಿಗೆ ಅವಕಾಶ ಕೊಡುವುದಿಲ್ಲ ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.



