ಕೆಲವರ ಬಳಿ ತುಂಬಾ ಹಣವಿರುತ್ತದೆ. ತಂದೆ ದುಡಿದಿಟ್ಟಿದ್ದೋ.. ತಾತನ ಆಸ್ತಿಯೋ.. ಅದೃಷ್ಟ ದಿಢೀರ್ ಎಂದು ಒಲಿದು ಬಂದಿದ್ದೋ.. ಲಾಟರಿ ಹೊಡೆದೋ.. ಹೇಗೋ ಒಂದು ಮಾರ್ಗದಲ್ಲಿ ದುಡ್ಡು ಬಂದಿರುತ್ತದೆ. ಆದರೆ ಎಷ್ಟೋ ಜನ ನೋಡ ನೋಡುತ್ತಲೇ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುತ್ತಾರೆ. ದಿವಾಳಿಯಾಗಿರುತ್ತಾರೆ. ಮಾನ ಮರ್ಯಾದೆ ಕಳೆದುಕೊಂಡು ದೇಶಭ್ರಷ್ಟರೂ ಆಗುತ್ತಾರೆ. ಧೀರೂಭಾಯ್ ಅಂಬಾನಿಯ ಮಗ ಅನಿಲ್ ಅಂಬಾನಿ (ಮುಖೇಶ್ ಅಂಬಾನಿ ಶ್ರೀಮಂತ. ಆದರೆ ತಮ್ಮ ಅನಿಲ್ ಅಂಬಾನಿ ದಿವಾಳಿಯಾದವನು), ವಿಜಯ್ ಮಲ್ಯ, ಸಹಾರಾ ಕಂಪೆನಿಯ ಸುಬ್ರತೋ ರಾಯ್, ಒಂದು ಕಾಲದಲ್ಲಿ ಸ್ಟಾರ್ ಆಗಿದ್ದ ಕಲಾವಿದರು (ಅಮಿತಾಭ್ ಬಚ್ಚನ್ ಒಂದು ಕಾಲದಲ್ಲಿ ದಿವಾಳಿಯಾಗಿ ಮತ್ತೆ ಎದ್ದು ನಿಂತು ಗೆದ್ದವರು. ಅದು ಸ್ಫೂರ್ತಿಯ ಕಥೆಯೂ ಹೌದು. ಕಳೆದುಕೊಂಡಿದ್ದ ಕಥೆ ಎಚ್ಚರಿಕೆಯ ಕಥೆಯೂ ಹೌದು)..ಹೀಗೆ ಉದಾಹರಣೆಗಳು ಬೇಕಾದಷ್ಟಿವೆ. ಹೀಗಾಗೋದು ಯಾಕೆ? ಶ್ರೀಮಂತರು ಬೀದಿಗೆ ಬೀಳೋಕೆ ಕಾರಣಗಳಾದರೂ ಏನು? ಅದು ಆಗದಂತೆ ತಪ್ಪಿಸಿಕೊಳ್ಳೋಕೆ ಏನು ಮಾಡಬೇಕು? ಇವನ್ನೆಲ್ಲ ಚಾಣಕ್ಯ ಬರೆದಿಟ್ಟಿದ್ದಾನೆ.
ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ರಾಜಕಾರಣಿ ಮತ್ತು ಅರ್ಥಶಾಸ್ತ್ರಜ್ಞ. ಇದನ್ನೆಲ್ಲ ಬರೆದದ್ದು ಈಗಲ್ಲ. ಆದರೆ ಅದು ಇಂದಿನ ಸಮಯದಲ್ಲೂ ಪ್ರಸ್ತುತ. ಆಚಾರ್ಯ ಚಾಣಕ್ಯನು ನೀತಿಶಾಸ್ತ್ರದಲ್ಲಿ, ಜೀವನ, ಹಣ, ಸಮಾಜ, ಸಂಬಂಧಗಳು, ವೈಯಕ್ತಿಕ ಜೀವನ, ಕೆಲಸದ ಸ್ಥಳ ಇತ್ಯಾದಿಗಳಿಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಪ್ರಮುಖ ವಿಷಯಗಳನ್ನು ಹೇಳಿದ್ದಾನೆ. ಆಚಾರ್ಯ ಚಾಣಕ್ಯನು ತನ್ನ ನೀತಿಯೊಂದರಲ್ಲಿನ ವಿಷಯಗಳ ಬಗ್ಗೆ ಹೇಳಿದ್ದಾನೆ, ಅದನ್ನು ಮಾಡೋದ್ರಿಂದ ಶ್ರೀಮಂತರು ಬೇಗ ಬಡವರಾಗುತ್ತಾರೆ.
ಹಣವನ್ನು ತಪ್ಪು ಜಾಗದಲ್ಲಿ ಹೂಡುವವರು
ಆಚಾರ್ಯ ಚಾಣಕ್ಯನ ಪ್ರಕಾರ, ಸ್ವಲ್ಪ ಹಣವನ್ನು ತಮ್ಮ ಕುಟುಂಬದ ಪಾಲನೆಗಾಗಿ ಮತ್ತು ಇತರರ ಯೋಗಕ್ಷೇಮಕ್ಕಾಗಿ ಬಳಸಬೇಕು. ಇದರ ನಂತರ, ಉಳಿದ ಹಣವನ್ನು ಹೂಡಿಕೆ ಮಾಡಬೇಕು ಇದರಿಂದ ಕೆಟ್ಟ ಸಮಯದಲ್ಲಿ ನಮಗೆ ಉಪಯುಕ್ತವಾಗಬಹುದು. ಆದರೆ ಜೂಜಾಟ, ಬೆಟ್ಟಿಂಗ್, ವೇಶ್ಯಾವಾಟಿಕೆ ಇತ್ಯಾದಿಗಳಲ್ಲಿ ಮರೆತು ಕೂಡ ಹಣ ಹಾಕಬಾರದು. ಈ ಕ್ರಿಯೆಗಳಿಗೆ ವ್ಯಸನಿಯಾಗುವ ಜನರು, ಎಷ್ಟೇ ಶ್ರೀಮಂತರಾಗಿದ್ದರೂ, ಬಹಳ ಬೇಗ ಬಡವರಾಗುತ್ತಾರೆ.
ಹಣದಿಂದ ಹಾನಿ ಮಾಡಬಾರದು
ಹಣವನ್ನು ಯಾವಾಗಲೂ ಇತರರ ಒಳಿತಿಗಾಗಿ ಬಳಸಬೇಕೇ ಹೊರತು ಯಾರೊಬ್ಬರಿಗೂ
ಹಾನಿ ಮಾಡಬಾರದು. ಕೆಲವರ ಬಳಿ ಎಷ್ಟು ಹಣವಿರುತ್ತೆ ಅಂದ್ರೆ ಅವರು ಅದನ್ನು ಇತರರಿಗೆ ಹಾನಿ ಮಾಡಲು ಬಳಸುತ್ತಾರೆ. ಲಕ್ಷ್ಮಿ ದೇವಿಯ ಕೃಪೆ ಅಂತಹವರ ಮೇಲೆ ಇರುವುದಿಲ್ಲ.
ಕೋಪಗೊಳ್ಳುತ್ತಾಳೆ ಮತ್ತು ಬಹು ಬೇಗ ಅಲ್ಲಿಂದ ಹೊರಡುತ್ತಾಳೆ. ಅಂತಹ ಜನರು ಬಡತನದ ಅಂಚನ್ನು ತಲುಪುತ್ತಾರೆ. ಜನರಿಗೆ ಅವರ ಬಗ್ಗೆ ಯಾವುದೇ ಸಹಾನುಭೂತಿ ಇರೋದಿಲ್ಲ.
ಉಳಿತಾಯ ಮಾಡದವರು
ಕೆಲವು ಜನರು ತುಂಬಾ ಐಷರಾಮಿ ಜೀವನ ನಡೆಸುವ ಸ್ವಭಾವವನ್ನು ಹೊಂದಿರುತ್ತಾರೆ, ಅವರು ಗಳಿಸುವಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಸಾಲ ಮಾಡಿ ಐಷಾರಾಮಿ ಜೀವನ ನಡೆಸುತ್ತಾರೆ. ಕ್ಟ ಬಂದಾಗ ಉಳಿತಾಯದ ಹೆಸರಿನಲ್ಲಿ ಅವರ ಬಳಿ ಏನೂ ಉಳಿಯೋದಿಲ್ಲ. ವ್ಯಕ್ತಿಯು ತನ್ನ ಭವಿಷ್ಯ ಮತ್ತು ಕೆಟ್ಟ ಸಮಯಗಳಿಗಾಗಿ ಹಣವನ್ನು ಉಳಿಸಬೇಕು. ಯೋಚಿಸದೆ ತಮ್ಮ ಹವ್ಯಾಸಗಳನ್ನು, ಅಸೆಗಳನ್ನು ಪೂರೈಸಲು ಹಣವನ್ನು ಖರ್ಚು ಮಾಡುವ ಜನರ ಬಳಿ ಹಣವೇ ಉಳಿಯೋದಿಲ್ಲ.



