ಗೆಲ್ಲುವ ಕುದುರೆ ಎಂದು ಗೆಲುವುದು
ಹಳ್ಳದ ಕಡೆಗೇ ನೀರು ಹರಿವುದೂ..
ಹಣವಂತರಿಗೇ ಹಣ ಸೇರುವುದೂ..
ಏನು ಮಾಯವೋ.. ಏನು ಮರ್ಮವೋ..
ಇದು ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ ಹಾಡಷ್ಟೇ ಅಲ್ಲ. ಬಹುತೇಕ ಎಲ್ಲರ ಸ್ಥಿತಿಯೂ ಇದೆ. ದುಡಿಮೆ ಸಾವಿರದಲ್ಲಿ, ಖರ್ಚು ಲಕ್ಷದಲ್ಲಿದ್ದರೂ ಬಹುತೇಕ ಮಂದಿ ಬರಿಗೈ ದಾಸರು. ದುಡ್ಡು ಅನ್ನೋದು ಹಾಗೆ ಬರುತ್ತೆ. ಹೀಗೆ ಹೋಗುತ್ತೆ. ವ್ಯಯ ಜಾಸ್ತಿ. ಆಯ ಕಡಿಮೆ. ಆದರೆ ಆ ಹಣ ಎಲ್ಲಿ ಹೋಯ್ತು.. ಆ ಖರ್ಚು ಅಗತ್ಯವಿತ್ತಾ ಎಂದೆಲ್ಲ ಯೋಚಿಸೋಕೆ ಜನರಿಗೂ ಪುರುಸೊತ್ತಿಲ್ಲ.
ದುಬಾರಿ ದುನಿಯಾ. ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಗಗನದಲ್ಲೇ ಇರುವಾಗ ಸಂಬಳ ಮಾತ್ರ ಗಂಟಲಲ್ಲೇ ಇರುತ್ತೆ. ಹೊರಗೆ ಹೇಳಿಕೊಳ್ಳೋಕೆ ನಾಚಿಕೆ. ಮಂತ್ಲಿ ಇಎಂಐ, ಕರೆಂಟ್ ಬಿಲ್, ಫೋನ್ ಬಿಲ್, ವಾಟರ್ ಬಿಲ್, ಗ್ಯಾಸ್ ಬಿಲ್, ಹೊಸದಾಗಿ ಸೇರ್ಪಡೆಯಾಗಿರೋ ಇಂಟರ್ನೆಟ್ ಬಿಲ್.. ಫೈನಲಿ ಖಾಲಿ ಕೈ ಸುಲ್ತಾನ. ಹೆಚ್ಚಿನ ಮಧ್ಯಮ ವರ್ಗದವರು ಸಂಬಳವಾದ ವಾರಕ್ಕೆಲ್ಲ ಫುಲ್ ನಿಖಾಲಿಯಾಗಿರ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ ಕೆಲವು ನಿಯಮಗಳನ್ನು ಪಾಲಿಸಿದ್ರೆ ಈ ಪರಿಸ್ಥಿತಿ ಇರಲ್ಲ. ಬರಲ್ಲ. ಸೇವಿಂಗ್ಸ್ ಇಲ್ಲದೇ ಇರೋದೇ ಇದಕ್ಕೆಲ್ಲ ಕಾರಣ. ಆದಾಯವನ್ನು ಮೀರಿದ ವೆಚ್ಚಗಳಿಗೆ ಕಡಿವಾಣ ಹಾಕೋಕೆ ಮಾಡಬೇಕಾದ್ದು ಲೆಕ್ಕಾಚಾರದ ವಿವೇಚನೆಯ ಖರೀದಿ. ಆದರೇನು.. ನಮ್ಮ ಮನಸ್ಸಿನ ಮೇಲೆ ನಮಗೇ ಕಂಟ್ರೋಲ್ ಇಲ್ಲದೇ ಇರೋವಾಗ ಅದಕ್ಕೂ ಬ್ರೇಕ್ ಹಾಕೋಕೆ ಆಗಲ್ಲ.
ಮನೆಯ ಈಶಾನ್ಯ ವಲಯವು ಮಾನವನ ಮನಸ್ಸನ್ನು ಪ್ರತಿನಿಧಿಸುತ್ತದೆ. ನೇರಳೆ, ಗುಲಾಬಿ, ಕೆಂಪು ಬಣ್ಣಗಳ ಉಪಸ್ಥಿತಿಯು ಈ ವಲಯದಲ್ಲಿದ್ದರೆ ಹಠಾತ್ ಖರೀದಿಗೆ ಕಾರಣವಾಗಬಹುದು. ಹಾಗಾಗಿ ಮನೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸಬೇಕು. ಇಲ್ಲಿ ಕೈಲಿ ಸಂಪಾದಿಸಿದ ಹಣ ಉಳಿಯಲು ಪಾಲಿಸಬೇಕಾದ ನಿಯಮಗಳ ಬಗ್ಗೆ ನೋಡೋಣ.
ಮನೆಯ ಬಾಗಿಲು ಕಿರಕಿರ ಶಬ್ದ ಮಾಡುತ್ತಿದ್ದರೆ ಅದನ್ನು ತಕ್ಷಣ ಪರಿಹರಿಸಿ. ಹೊರಗಿನ ಬಾಗಿಲು ಯಾವುದೇ ಶಬ್ದವನ್ನು ಮಾಡದಂತೆ ಎಚ್ಚರಿಕೆ ವಹಿಸಬೇಕು.
ಮನೆಯಲ್ಲಿ ಔಷಧಿಗಳನ್ನು ಮನೆಯ ಈಶಾನ್ಯದಲ್ಲಿ ಇಡಬೇಡಿ. ಅದು ಈಶಾನ್ಯದಲ್ಲಿದ್ದರೆ ಮನೆಯಲ್ಲಿ ರೋಗರುಜಿನಗಳೂ ಹೆಚ್ಚು. ಹಣದ ಖರ್ಚೂ ಹೆಚ್ಚು.
ಆಗ್ನೇಯ ದಿಕ್ಕಿನಲ್ಲಿ ನೀಲಿ ಬಣ್ಣ ಇರುವುದು ಬೇಡ. ನೀಲಿ ಬಣ್ಣವನ್ನು ತೆಗೆದು ಅಲ್ಲಿಗೆ ಹಳದಿ ಅಥವಾ ಗುಲಾಬಿ ಬಣ್ಣ ಇರುವಂತೆ ನೋಡಿಕೊಳ್ಳಿ. ಮನೆಗೆ ಹಣವೂ ಬರುತ್ತದೆ.ನೆಮ್ಮದಿಯೂ ಇರುತ್ತದೆ.
ಕಪ್ಪು ಸದಾ ನೆಗೆಟಿವ್ ಬಿಂಬಿಸುತ್ತದೆ. ಹೀಗಾಗಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಕಪ್ಪು ಅಶುಭ. ವೃತ್ತಿಯಲ್ಲೂ ಏರಿಳಿತ ಹೆಚ್ಚು. ಅದನ್ನು ಕಪ್ಪು ಬಟ್ಟೆ ಧರಿಸುವುದನ್ನು ಬಿಡುವುದರ ಮೂಲಕ ತಪ್ಪಿಸಿ. ಆದರೆ ನೆನಪಿರಲಿ, ಅಯ್ಯಪ್ಪ ಮಾಲೆ ಧರಿಸುವವರಿಗೆ ಇದೇ ಶುಭವೂ ಹೌದು.
ಕುಬೇರನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಮತ್ತು ವೈಭವ ಮತ್ತು ಚಿನ್ನವನ್ನು ಪ್ರತಿನಿಧಿಸುತ್ತಾನೆ. ಈಶಾನ್ಯ ದಿಕ್ಕನ್ನು ಕುಬೇರನು ನಿಯಂತ್ರಿಸುತ್ತಾನೆ. ಆದ್ದರಿಂದ ಶೌಚಾಲಯ, ಶೂ ಇಡುವ ಸ್ಥಳ ಮತ್ತು ಯಾವುದೇ ಬೃಹತ್ ಪೀಠೋಪಕರಣಗಳನ್ನು ಅಲ್ಲಿಡಬೇಡಿ. ಬದಲಿಗೆ ಅಲ್ಲಿ ಹಣ ಅಥವಾ ಧಾನ್ಯ ಇರುವಂತೆ ನೋಡಿಕೊಳ್ಳಿ. ಮನೆಯ ಉತ್ತರ ಭಾಗದ ಉತ್ತರ ಗೋಡೆಯ ಮೇಲೆ ಕನ್ನಡಿ ಅಥವಾ ಕುಬೇರ ಯಂತ್ರವನ್ನು ಅಳವಡಿಸಿ.
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆ, ಸ್ನಾನಗೃಹ ಮತ್ತು ಹೊರಾಂಗಣ ಗಾರ್ಡನ್ ಪ್ರದೇಶದಲ್ಲಿ ನೀರು ಸೋರಬಾರದು. ಅದು ಆರ್ಥಿಕ ನಷ್ಟದ ಸಂಕೇತ. ಮನೆಯೊಳಗಿನ ಗೋಡೆಗಳಿಂದ ಅಥವಾ ಮುರಿದ ಪೈಪ್ಲೈನ್ನಿಂದ, ನಲ್ಲಿಯಿಂದ ಯಾವುದೇ ನೀರಿನ ಸೋರಿಕೆಯಾಗದಂತೆ ನೋಡಿಕೊಳ್ಳಿ.



