ಒಬ್ಬ ವ್ಯಕ್ತಿಯ ಭವಿಷ್ಯ ನಿರ್ಧರಿಸೋದು ಜನ್ಮ ನಕ್ಷತ್ರ, ತಿಥಿ, ಗ್ರಹಗಳ ಚಲನೆ ಮತ್ತಿತರ ಅಂಶಗಳು. ಅದೇ ರೀತಿ ನಿಮ್ಮ ಹುಟ್ಟಿದ ದಿನ ಅಂದರೆ ವಾರವೂ ಅಷ್ಟೇ ಮುಖ್ಯ. ಅದರ ಪರಿಣಾಮ ಒಳ್ಳೆಯದೋ.. ಕೆಟ್ಟದ್ದೋ.. ಪ್ರಭಾವವನ್ನಂತೂ ಬೀರುತ್ತೆ. ಇದು ಶನಿವಾರ ಜನಿಸಿದವರ ಕಥೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ದಿನವೂ ಒಂದೊಂದು ಗ್ರಹದೊಂದಿಗೆ ಸಂಬಂಧಿಸಿದೆ. ಆ ಗ್ರಹಗಳು ವ್ಯಕ್ತಿತ್ವ ಮತ್ತು ಜೀವನ ಶೈಲಿಯ ಮೇಲೆ ಪ್ರಭಾವ ಬೀರುತ್ತವೆ.
ಶನಿವಾರ ಹುಟ್ಟಿದವರಿಗೆ ಶನಿಯೇ ಮೂಲ. ಪ್ರಭಾವಿತರಾಗೋದು ಕೂಡಾ ಶನಿಯಿಂದಲೇ.ಇವರು ಹುಟ್ಟಾ ಪ್ರತಿಭಾವಂತರು. ಆದರೆ ಇಂಟ್ರಾವರ್ಟ್ಗಳು. ಅಂದ್ರೆ ಅಂತರ್ಮುಖಿಗಳು. ಜನರೊಂದಿಗೆ ಬೆರೆಯುವುದು ಕಡಿಮೆ. ಆದರೆ ವ್ಯಕ್ತಿತ್ವದಲ್ಲಿ ಧೃಡವಾಗಿರುತ್ತಾರೆ. ಜೀವನದಲ್ಲಿ ಶಿಸ್ತು ಇಟ್ಟುಕೊಂಡಿರುತ್ತಾರೆ. ಶಿಸ್ತಿನ ಶಿವಪ್ಪನಾಯಕರೆಂದರೆ ಅತಿಶಯೋಕ್ತಿಯೂ ಅಲ್ಲ. ತಾಳ್ಮೆ, ಶಾಂತಿ ಇವರ ರಕ್ತದಲ್ಲೇ ಇದೆ.ಆದರೆ ಅಪರೂಪಕ್ಕೆ ಆ ಶಾಂತಿಯ ರಕ್ತ ಕೊತಕೊತ ಕುದಿಯುತ್ತದೆ. ಆಗ ಅದನ್ನು ನಿಗ್ರಹಿಸೋದು ಬೇರೆಯವರಿಗೆ ಬಿಡಿ, ಸ್ವತಃ ಅವರಿಗೂ ಕಷ್ಟ ಕಷ್ಟ ಕಷ್ಟ.
ಶನಿ ಹೇಳಿ ಕೇಳಿ ನ್ಯಾಯದ ಅಧಿಪತಿ. ಯಮಧರ್ಮರಾಯನ ಮಗ. ಹೀಗಾಗಿ ಇವರದ್ದು ಸದಾ ಸೇವೆಗೆ ತುಡಿಯುವ ಮನಸ್ಸು. ಧರ್ಮೋ ರಕ್ಷತಿ ರಕ್ಷಿತಃ ಅನ್ನೋದು ಇವರ ಮಂತ್ರ. ಹೀಗಾಗಿ ಬಡವರು, ನಿರ್ಗತಿಕರ ಸೇವೆ ಇವರಿಗೆ ಅಚ್ಚುಮೆಚ್ಚು. ಶ್ರಮಜೀವಿಗಳು. ಮೆದುಳಿಗಿಂತ ಹೃದಯದ ಮಾತು ಹೆಚ್ಚು ಕೇಳುವವರು. ಹೀಗಾಗಿ ಯಶಸ್ಸು ಸ್ವಲ್ಪ ನಿಧಾನ. ಪ್ರಯಾಣವೆಂದರೆ ಪ್ರೀತಿ. ತಿರುಗಾಲೆ ತಿಪ್ಪರು ಎನ್ನಬಹುದು. ಶನಿವಾರ ಜನಿಸಿದ ಹೆಣ್ಣು ಮತ್ತು ಗಂಡು ಇಬ್ಬರ ವ್ಯಕ್ತಿತ್ವವೂ ಇಂಥದೇ.ಪ್ರಾಕ್ಟಿಕಲ್ ಆಗಿ ಬದುಕುತ್ತಾರೆ. ಕನಸಿನಲ್ಲಿ ಬದುಕುವವರಲ್ಲ.
ಯಾವುದೇ ಕೆಲಸ ವಹಿಸಿಕೊಂಡರೂ ಎಕ್ಸ್ಪರ್ಟ್ ಆಗಲು ತುಡಿಯುತ್ತಾರೆ. ಎಕ್ಸ್ಪರ್ಟ್ ಆಗುತ್ತಾರೆ ಕೂಡಾ. ಜೈ ಜವಾನ್.. ಜೈ ಕಿಸಾನ್.. ಜೈ ವಿಜ್ಞಾನ್. ಯಾವುದಾದರೂ ಓಕೆ. ಒಳ್ಳೆಯ ಹೆಸರು, ಖ್ಯಾತಿ ಮತ್ತು ಹಣ ಎಲ್ಲವನ್ನೂ ಗಳಿಸುತ್ತಾರೆ. ಆದರೆ ಕಳೆದುಕೊಳ್ಳೋಕೂ ಹಿಂದೆ ಮುಂದೆ ನೋಡಲ್ಲ. ಹಣಕಾಸಿನ ವಿಷಯಕ್ಕೆ ಬಂದರೆ ಇವರದ್ದು ತೂತು ಕೈ. ದುಡ್ಡು ನಿಲ್ಲಲ್ಲ. ನಿಂತ ದುಡ್ಡು ನೆಲೆಯಾಗಲ್ಲ. ದುಡ್ಡಿಗಿಂತ ಹೆಚ್ಚಾಗಿ ಮಾಡಿದ ಕೆಲಸ ಸರಿಯಾದರೆ ಇವರಿಗೆ ತೃಪ್ತಿ. ಆತುರದಲ್ಲಿ ಮತ್ತೊಬ್ಬರ ತಪ್ಪುಗಳಿಗೆ ತಲೆ ಕೊಡುವುದು ಇವರ ಚಟ ಹಾಗೂ ಹವ್ಯಾಸ.
ನಿಷ್ಟಾವಂತ ಪ್ರೇಮಿ. ಅಫೇರ್ ಇಟ್ಟುಕೊಳ್ಳೋ ವ್ಯಕ್ತಿತ್ವ ಅಲ್ಲ. ಗಂಡಸರೇ ಆಗಲಿ, ಹೆಂಗಸರೇ ಆಗಲಿ.. ನಾಚಿಕೆಯೇ ಆಭರಣ. ಪ್ರೀತಿಯಲ್ಲಿ ಮೋಸಗಾರರಲ್ಲ. ಆದರೆ ಇವರಿಗೆ ಮೋಸವಾದರೆ ವ್ಯಘ್ರರಾಗುತ್ತಾರೆ. ಎಷ್ಟೇ ಜಗಳವಾಗಲಿ, ಸಮಯ ಸರಿದ ಮೇಲೆ ಕ್ಷಮಿಸುವುದು ಇವರ ಗುಣ. ಪ್ರೀತಿ ಹೇಗಿರುತ್ತೆ ಎಂದರೆ ಉಸಿರುಗಟ್ಟುವಂತೆ ಪ್ರೀತಿಸುತ್ತಾರೆ. ಆದರೂ.. ಸಂಗಾತಿಗೆ ಸಮಯ ಕೊಡದೇ ಇರುವುದು ಇವರ ಸಮಸ್ಯೆ. ಅದನ್ನು ಪಾಲಿಸಿದರೆ ಇವರ ಸಂಸಾರ ಆನಂದ ಸಾಗರ.
ಶನಿದೇವರ ಪೂಜೆ ತಪ್ಪದೇ ಮಾಡಬೇಕು. ಈಶ್ವರನ ಪೂಜೆಯನ್ನೂ ಮಾಡಬೇಕು. ಶನಿವಾರದಂದು ಜನಿಸಿದವರು ಪ್ರತಿ ಶನಿವಾರ ಶನಿ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಆಗ ಮಹಾಲಕ್ಷ್ಮಿ ವರವೂ ಸಿಗಬಹುದು. ದೇವಿಯ ಆರಾಧನೆ ಒಳ್ಳೆಯದು.



